ಮಕ್ಕಳ ಕ್ರಿಯಾಶಕ್ತಿಯನ್ನು ಉದ್ಧೀಪಿಸುವ ರಂಗರಂಗು ರಜಾಮೇಳ
ಸಮುದಾಯವು ಕಳೆದೈದು ವರ್ಷಗಳಿಂದಲೂ ಮಕ್ಕಳಿಗಾಗಿ ಉಚಿತ ರಜಾಮೇಳವನ್ನು ನಿಯಮಿತವಾಗಿ ನಡೆಸುತ್ತಾ ಬಂದಿದೆ. ಮಕ್ಕಳ ರಜಾಮೇಳಗಳು ವ್ಯಾಪಾರವಾಗಬಾರದು ಎಂಬ ಕಾಳಜಿಯಿಂದ ರಂಗರಂಗು ರಜಾಮೇಳದಲ್ಲಿ ಭಾಗವಹಿಸುವ ಮಕ್ಕಳಿಂದ ಪ್ರವೇಶಶುಲ್ಕವಿರುವುದಿಲ್ಲ. ಮೇಳದಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಮತ್ತು ವಲಸೆ ಕಾರ್ಮಿಕ ವಿದ್ಯಾರ್ಥಿಗಳಿಗೆ ಪ್ರಾಶಸ್ತ್ಯದ ಮೇಲೆ ಪ್ರವೇಶ ನೀಡಲಾಗುತ್ತದೆ.

ವರ್ಷದ ಮೇಳವು ಎಪ್ರಿಲ್ 23 ರಿಂದ ಮೇ 2 ರವರೆಗೆ ನಡೆಯುತ್ತದೆ. ರಜಾಮೇಳದಲ್ಲಿ ನೆಲಮೂಲದ ಸಂಸ್ಕøತಿಯನ್ನು ಮಕ್ಕಳಿಗೆ ಪರಿಚಯಿಸುವ ಉದ್ದೇಶವಿದೆ. ಮಕ್ಕಳ ಅಸಾಧಾರಣ ಕ್ರಿಯಾಶಕ್ತಿಯನ್ನು ಉದ್ಧೀಪಿಸುವ, ಅವರ ವ್ಯಕ್ತಿತ್ವವನ್ನು ನೆಲದೊಡನೆ ಬೆಸೆಯುವ, ಜಾತಿ-ಮತ-ಭಾಷೆಗಳ ಹೆಸರಿನಲ್ಲಿ ನಾವು ನಿರ್ಮಿಸಿಕೊಂಡಿರುವ ಗೋಡೆಗಳನ್ನು ಮೀರಿ ಮನುಷ್ಯತ್ವದ ವಿಶಾಲ ಕುಟುಂಬದೊಳಗೆ ಬದುಕುವದನ್ನು ಕಲಿಯಲು ಮೇಳದಲ್ಲಿ ಒತ್ತು ನೀಡಲಾಗುವುದು. ಮೇಳದ ಭಾಗವಾಗಿ ಮಕ್ಕಳು ಹೊರಸಂಚಾರ, ಮಕ್ಕಳ ಸಂತೆ, ಕಛೇರಿ ಭೇಟಿಗಳನ್ನು ಮಾಡುವರು.


ಪ್ರತಿ ವರ್ಷದಂತೆ ಮೇಳದ ಮಕ್ಕಳು ವರ್ಷವೂ ಮೇಳದ ಸಮಾರೋಪ ಸಮಾರಂಭದಲ್ಲಿ ನಾಟಕ ಪ್ರದರ್ಶನವನ್ನು ನೀಡಲಿರುವರು. ನಮ್ಮನ್ನಗಲಿದ ಕಲಾವಿದ, ಹಿತೈಷಿ ಭೋಜುಹಾಂಡ ಅವರ ನೆನಪುಗಳಿಗೆ ಮೇಳವು ಋಣಿಯಾಗಿರುವುದು.
ಮನುಷ್ಯತ್ವಕ್ಕೆ ಗಡಿಗಳಿಲ್ಲ. ಮಾನವೀಯತೆಯನ್ನು ಮೀರಿದ ರಾಷ್ಟ್ರೀಯತೆಯೂ ಇಲ್ಲ: ವರದೇಶ ಹಿರೇಗಂಗೆ

ಪ್ರೊ. ವರದೇಶ ಹಿರೇಗಂಗೆ(ಸಂಗ್ರಹ ಚಿತ್ರ)

ಗಡಿಗಳನ್ನು ಮೀರಿದ ಜಗತ್ತನ್ನು ಆಶಿಸುತ್ತಿದ್ದ ಕವಿ ಠಾಗೋರರು ರಾಷ್ಟ್ರೀಯವಾದದ ಪ್ರಖರ ಟೀಕಾಕಾರರಾಗಿದ್ದರು. ಆದರೆ, ಅವರು ಬರೆದ ಜನಗಣಮನ ನಮ್ಮ ರಾಷ್ಟ್ರಗೀತೆಯಾಗಿದೆ. ಇನ್ನೂ ವಿಶೇಷವೆಂದರೆ ಅವರೇ ಬರೆದ ಗೀತೆಯೊಂದು ನಮ್ಮ ನೆರೆ ರಾಷ್ಟ್ರದ ರಾಷ್ಟ್ರಗೀತೆಯೂ ಹೌದು. ನಮ್ಮ ರಾಷ್ಟ್ರೀಯವಾದವನ್ನು ಈ ಸಂಗತಿಗಳೇ ಚೆನ್ನಾಗಿ ವಿವರಿಸುತ್ತವೆ. ನಮ್ಮದು ಎಲ್ಲ ಜಾತಿ, ಧರ್ಮಗಳನ್ನು ಮತ್ತು ಎಲ್ಲ ಬಗೆಯ ಅಭಿಪ್ರಾಯ, ಪಂಥಗಳನ್ನು ಒಳಗೊಂಡು ರೂಪುಗೊಳ್ಳುತ್ತಿರುವ ರಾಷ್ಟ್ರವಾದ. ಎಲ್ಲ ಬಗೆಯ ಶೋಷಣೆ, ಹಸಿವು, ಅಸಮಾನತೆಗಳ ವಿರುದ್ಧ ತನ್ನ ಅಸಹನೆಯನ್ನು ವ್ಯಕ್ತಪಡಿಸಲು ನಮ್ಮ ರಾಷ್ಟ್ರವಾದದಲ್ಲಿ ಅವಕಾಶವಿದೆ” ಎಂದು ಮಣಿಪಾಲದ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕರಾದ ಶ್ರೀ ವರದೇಶ ಹಿರೇಗಂಗೆ ಅಭಿಪ್ರಾಯಪಟ್ಟರು. ಅವರು ಕುಂದಾಪುರ ಸಮುದಾಯ ಆಯೋಜಿಸಿದ್ದ ನಮ್ಮೊಳಗಿನ ರಾಷ್ರೀಯತೆ- ಒಂದು ಮಾತುಕತೆ ಎಂಬ ಸಂವಾದದಲ್ಲಿ ವಿಷಯವನ್ನು ಮಂಡಿಸುತ್ತಿದ್ದರು. ಶ್ರೀ ವರದೇಶ ಹಿರೆಗಂಗೆಯವರು ಮುಂದುವರಿದು, ಬ್ರಿಟೀಷರ ವಸಾಹತುಶಾಹಿ ಆಡಳಿತವು ಬೇರೆ ಬೇರೆ ಆಡಳಿತದಲ್ಲಿ ಹಂಚಿಹೋಗಿದ್ದ ಜನರನ್ನು ಒಂದೇ ಆಡಳಿತದಡಿ ತಂದಿರುವುದು ಮಾತ್ರವಲ್ಲ ಇಲ್ಲಿನ ಸಂಪತ್ತನ್ನು ಅವರು ಬಾಚಿಕೊಳ್ಳುತ್ತಿರುವುದರ ವಿರುದ್ಧ, ಅವರ ದುರಾಡಳಿತದ ವಿರುದ್ಧ ಜನರು ಧ್ರುವೀಕರಣಗೊಳ್ಳುವಲ್ಲಿ ತನ್ನ ಕೊಡುಗೆಯನ್ನು ನೀಡಿದೆÉ. ಮೊದಲ ಸ್ವಾತಂತ್ರ ಸಂಗ್ರಾಮವು ಅಂತಹ ಧ್ರುವೀಕರಣದ ಫಲ. ಆಗ ಭಾರತವೆಂಬ ಪರಿಕಲ್ಪನೆ ಇಲ್ಲದಿದ್ದರೂ ಬೇರೆ ಬೇರೆ ಜಾತಿ, ಧರ್ಮ, ಪ್ರಾಂತ್ಯದ ಜನರು ಒಗ್ಗೂಡಿ ಕೊನೆಯ ಮೊಗಲ್ ದೊರೆ ಬಹುದ್ದಾರ್ ಷಾರನ್ನು ತಮ್ಮ ರಾಜನೆಂದು ಘೋಷಿಸಿದರು. ರಾಷ್ರೀಯತೆಯ ಪರಿಕಲ್ಪನೆ ಆನಂತರವೂ ಮತ್ತೆ ಮತ್ತೆ ತಿದ್ದಿಕೊಳ್ಳುತ್ತಾ ಸಾಗಿ ಬಂದಿದೆ ಎಂದರು. ಇದಕ್ಕೂ ಮುನ್ನ, ಸಂವಾದಕ್ಕೆ ಪ್ರಸ್ತಾವನೆಯಾಗಿ ಮಾತನಾಡಿದ ಡಾ. ಹಯವದನ ಮೂಡುಸಗ್ರಿ ದೇಶಕ್ಕೂ ರಾಷ್ಟ್ರಕ್ಕೂ ವ್ಯತ್ಯಾಸವಿದೆ. ದೇಶವು ಒಂದು ರಾಜಕೀಯ ಸರಹದ್ದನ್ನು ಸೂಚಿಸುತ್ತದೆ. ಆದರೆ, ರಾಷ್ಟ್ರವು ಒಂದು ಪ್ರಕ್ರೀಯೆಯಾಗಿದೆ. ನಮ್ಮ ಜಾತಿ, ನಮ್ಮ ಊರು, ನಮ್ಮ ಭಾಷಿಕ ವಲಯಗಳು ಹೇಗೆ ನಮ್ಮ ಗುರುತಾಗಿ ಪರಿಣಮಿಸುತ್ತವೋ ಅಷ್ಟೇ ಅಯಾಚಿತವಾಗಿ ರಾಷ್ಟ್ರವು ನಮ್ಮ ಗುರುತಾಗಿ ರೂಪುಗೊಳ್ಳುವುದಿಲ್ಲ. ಇದ್ನು ಬಲವಂತದಿಂದ ಉಂಟಾಗುವಂತದ್ದಲ್ಲ ಎಂದರು. ಮಾನವ ಘನತೆಯನ್ನು ಕಾಪಾಡುವುದು ನಮ್ಮ ಅತ್ಯಂತಿಕ ಗುರಿ ಎಂಬುದನ್ನು ಒಪ್ಪಿಕೊಂಡಾಗ ರಾಷ್ಟ್ರೀಯತೆಯ ಚರ್ಚೆಗಳು ಅರ್ಥಪೂರ್ಣವಾಗಿ ನಡೆಯಲು ಸಾಧ್ಯ ಎಂದರು.


kundapraa.com

news kannada

ಈ ಭೂಮಿ ನಮ್ಮದು- ಪರಿಸರ ಜಾಗೃತಿ ಕಾರ್ಯಕ್ರಮ    ಕುಂದಾಪುರದ  ಸಮುದಾಯ ಸಾಂಸ್ಕೃತಿಕ  ಸಂಘಟನೆಯು   ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ಸತಿನ ಸಹಯೋಗದಲ್ಲಿ ಕೆ ಜಿ ಜಗನ್ನಾಥರಾವ್ ಸರ್ಕಾರಿ ಪ್ರೌಢಶಾಲೆ.ಕೋಣಿ ಇಲ್ಲಿನ ಇಕೋ ಕ್ಲಬ್‍ನ ಜೊತೆಗೂಡಿ “ಈ ಭೂಮಿ ನಮ್ಮದು”  ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತು. ಕುಂದಾಪುರ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷರಾದ ಉದಯ ಗಾಂವಕಾರ ಪ್ರಾಸ್ತಾವಿಕವಾಗಿ ಮಾತನಾಡಿ ಈ ಭೂಮಿಯಲ್ಲಿ ನಮ್ಮಿಂದಾಗಿ ಅಳಿದುಹೋದ ಜೀವಸಂಕುಲಗಳನ್ನು ಉದಾಹರಿಸುತ್ತಾ ಉಳಿದಿರುವ ವೈವಿಧ್ಯಮಯ ಜೀವಸಂಕುಲಗಳ ಹಕ್ಕುಗಳ ರಕ್ಷಣೆ, ಪೋಷಣೆ ಇಂದಿನ ಅಗತ್ಯ ಹಾಗೂ ಅದೇ ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದರು.  ಕರಾವಿಪ ದ ಉಡುಪಿ ಘಟಕದ ಅಧ್ಯಕ್ಷರಾದ ಶ್ರೀ ಯು ಆರ್ ಮಧ್ಯಸ್ಥರು ವಿದ್ಯಾರ್ಥಿಗಳಿಗೆ ಅವರ ಹಸಿರು ಕರ್ತವ್ಯಗಳನ್ನು ಸರಳವಾಗಿ ವಿವರಿಸಿದರು. ಶುದ್ಧ ನೀರಿನ ಕುರಿತಾದ “ಕ್ರಿ.ಶ.2070ರಲ್ಲಿ ಬರೆದ ಒಂದು ಪತ್ರ” ಪ್ರಸ್ತುತಪಡಿಸಲಾಯಿತು. ನಂತರ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿಯ ರಸಪ್ರಶ್ನೆ ಕಾರ್ಯಕ್ರಮ ನಡೆಸಿ ಪುಸ್ತಕ ರೂಪದಲ್ಲಿ ಬಹುಮಾನ ನೀಡಲಾಯಿತು. ಶಾಲೆಯ ಇಕೋ ಕ್ಲಬ್‍ನ ಸದಸ್ಯರಿಗೆ ಬಟ್ಟೆಯ ಚೀಲಗಳನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಸುರೇಶಪ್ಪ ವಹಿಸಿದ್ದರು. ಕುಂದಾಪುರ ಸಮುದಾಯದ ಖಜಾಂಚಿ ಶ್ರೀ ಬಾಲಕೃಷ್ಣ ಶಾಲೆಯ ಇಕೋ ಕ್ಲಬ್‍ನ ಸಂಚಾಲಕರಾದ ಶ್ರೀಮತಿ ಪ್ರಮೀಳಾ, ಅಧ್ಯಕ್ಷರಾದ ಕುಮಾರ ಜಯರಾಜ್ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.  ಕುಂದಾಪುರ ಸಮುದಾಯದ ಕಾರ್ಯದರ್ಶಿ ಸದಾನಂದ ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು.  
         

ರಂಗಪಾಠ: ಕುಂದಾಪುರ ಸಮುದಾಯದ ಸಹಯೋಗದಲ್ಲಿ ಶಿಕ್ಷಣದಲ್ಲಿ ರಂಗಕಲೆ ಕಾರ್ಯಾಗಾರಕುಂದಾಪುರದ ಸಮುದಾಯ ಸಾಂಸ್ಕøತಿಕ ಸಂಘಟನೆಯ ಸಹಯೋಗದೊಂದಿಗೆ ಕುಂದಾಪುರ ವಲಯ ಸರ್ವ ಶಿಕ್ಷಣ ಅಭಿಯಾನದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ರಂಗಪಾಠ ಎಂಬ ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕ ತರಗತಿ ಸಂವಹನದ ಸಾಧ್ಯತೆಗಳನ್ನು ರಂಗಭಾಷೆಯ ಮೂಲಕ ವಿಸ್ತರಿಸುವ ಕುರಿತು ಶಿಕ್ಷಕರೊಂದಿಗೆ ಅನುಭವ ಹಂಚಿಕೆ ಮಾಡಲಾಯ್ತು. ಉದ್ಘಾಟನಾ ಸಭೆಯಲ್ಲಿ ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಆರ್. ಬಿ ನಾಯಕ , ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೋಭಾ ಶೆಟ್ಟಿ , ಸಮುದಾಯ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷರಾದ ಶ್ರೀ ಉದಯ ಗಾಂವಕಾರ , ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕುಂದಾಪುರ ವಲಯ ಅಧ್ಯಕ್ಷರಾದ ಶ್ರೀ ಸದಾರಾಮ ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀ ಸತೀಶ ಶೆಟ್ಟಿಗಾರ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಾಗಾರದಲ್ಲಿ ಸ.ಹಿ.ಪ್ರಾ ಶಾಲೆ ಹೆಸಕುತ್ತೂರು ಇಲ್ಲಿನ ವಿದ್ಯಾರ್ಥಿಗಳು ಪ್ರಸ್ತುಪಡಿಸಿದ `ಅಧ್ವಾಪುರ’, ಮಚ್ಚಟ್ಟು ಶಾಲೆಯ ವಿದ್ಯಾರ್ಥಿಗಳ `ಈ ಭೂಮಿ ನಮ್ಮೊಬ್ಬರದೇ ಅಲ್ಲ’ ಬೈಲೂರು ಶಾಲೆಯ ವಿದ್ಯಾರ್ಥಿಗಳ `ಮಾಯದ ಕುದುರೆ ’ ನಾಟಕಗಳನ್ನು ಪ್ರದರ್ಶಿಸಲಾಯಿತು.. ನಾಟಕ ಕಟ್ಟುವ ಕ್ರಿಯೆಯ ಕುರಿತು ಶಿಕ್ಷಕರೊಂದಿಗೆ ಸಂವಾದವನ್ನು ರಂಗಕರ್ಮಿ ವಾಸುದೇವ ಗಂಗೇರ, ಸದಾನಂದ ಬೈಂದೂರು ನಡೆಸಿಕೊಟ್ಟರು. ಸಮುದಾಯ ರಂಗತಂಡವು ವಾಸುದೇವ ಗಂಗೇರ ನಿರ್ದೇಶನದಲ್ಲಿ `ಮಹಾತ್ಮ’ ನಾಟಕವನ್ನು ಪ್ರದರ್ಶಿಸುವ ಮೂಲಕ ತಾವೂ ನಾಟಕ ನಿರ್ದೇಶಿಸಬಹುದೆಂಬ ಸ್ಪೂರ್ತಿಯನ್ನು ಶಿಕ್ಷಕರಿಗೆ ನೀಡಿದರು.
***

ಅಧ್ವಾನಪುರ


ಈ ನಾಟಕವು ಮನುಷ್ಯನ ಅತಿಯಾಸೆ ಮತ್ತು ಬುದ್ಧಿಗೇಡಿ ನಡುವಳಿಕೆಗಳನ್ನು ತಿಳಿಹಾಸ್ಯ ಮತ್ತು ವ್ಯಂಗ್ಯೋಕ್ತಿಗಳ ಮೂಲಕ ಗೇಲಿಮಾಡುತ್ತದೆ. ಚುರುಕಾದ ಸಂಭಾಷಣೆ, ಹಾಡುಗಳ ಮೂಲಕ ನಾಟಕವು ಎಲ್ಲವನ್ನೂ ಯಂತ್ರದ ಮೂಲಕ
ಸಾಧಿಸಬಹುದೆಂಬ ಮನಸ್ಥಿತಿಯನ್ನು ಲೇವಡಿಮಾಡುತ್ತದೆ.
ರಚನೆ: ದುಂಡೀರಾಜ್. ಎಚ್ ನಿರ್ದೇಶನ: ಶ್ರೀಧರ ಉಡುಪ
ರಂಗತಂಡ: ಸ.ಹಿ.ಪ್ರಾ ಶಾಲೆ, ಹೆಸಕುತ್ತೂರು

ಮಾಯದ ಕುದುರೆ

ಶಕ್ತಿ ಕಳೆದುಕೊಂಡು ಭೂಮಿಗೆ ಬರುವ ಅನ್ಯಗ್ರಹ ಜೀವಿಯೊಂದು ಪುರಾಣ ಪಾತ್ರಗಳೊಂದಿಗೆ ಮುಖಾಮುಖಿಯಾಗುತ್ತದೆ. ಈ ರಮ್ಯಕತೆಗೆ ರಾಜಕೀಯ ವಿಡಂಬನೆಯ ಸ್ಪರ್ಶ ನೀಡುವ ಪ್ರಯತ್ನವನ್ನು ನಾಟಕದಲ್ಲಿ ಮಾಡಲಾಗಿದೆ.
ಮೂಲ: ಐ. ಕೆ ಬೋಳುವಾರ ರೂಪಾಂತರ, ನಿರ್ದೇಶನ: ಆನಂದ ತಪ್ಪಲು
ರಂಗತಂಡ: ಸ.ಹಿ.ಪ್ರಾ ಶಾಲೆ, ಬೈಲೂರು

ಈ ಭೂಮಿ ನಮ್ಮೊಬ್ಬರದ್ದೇ ಅಲ್ಲ

ವಿಜ್ಞಾನದ ಪರಿಕಲ್ಪನೆಗಳು, ವೈಜ್ಞಾನಿಕ ಮನೋಭಾವ, ಪರಿಸರ ಸಂರಕ್ಷಣೆ ಅಥವಾ ವಿಜ್ಞಾನಿಗಳ ಜೀವನ ಕತೆಗಳನ್ನು ರಂಗದ ಮೇಲೆ ತಂದಾಗ ಅವುಗಳನ್ನು ವಿಜ್ಞಾನ ನಾಟಕ ಎಂದು ಕರೆಯುತ್ತಾರೆ. ಇದು ಪರಿಸರ ಕಾಳಜಿಯ ವಿಜ್ಞಾನ ನಾಟಕ. ಸಕಲ ಜೀವಿಗಳಿಗೂ ಈ ಭೂಮಿಯ ಸಂಪನ್ಮೂಲಗಳನ್ನು ಬಳಸುವ ಹಕ್ಕಿದೆ. ಮನುಷ್ಯನೊಬ್ಬನೇ ಈ ಭೂಮಿಯ ವಾರಸುದಾರನಲ್ಲ ಎಂಬುದನ್ನು  ನಾಟಕ ವಾದಿಸುತ್ತದೆ.
ರಂಗಪಠ್ಯ: ಮೀರಾ ನಿರ್ದೇಶನ: ಶ್ರೀಧರ ಎಸ್
ರಂಗತಂಡ: ಸ.ಹಿ.ಪ್ರಾ ಶಾಲೆ, ಮಚ್ಚಟ್ಟು

ಮಹಾತ್ಮ

ಬಾಲ್ಯಕ್ಕೂ, ಬದುಕಿಗೂ, ಬಂದೂಕಿನ ಗುಂಡಿಗೂ ಗಾಂಧಿ ಎದೆಯೊಡ್ಡಿಕೊಂಡ ಕತೆಯು ಇತಿಹಾಸದ ಬಹಳ ಮುಖ್ಯ ಕೊಂಡಿಯೆಂದು ಈ ನಾಟಕ ಗ್ರಹಿಸುತ್ತದೆ. ಬಿಡುಗಡೆಯ ಹಂಬಲವನ್ನೇ ಮನುಷ್ಯಪ್ರಜ್ಞೆಯ ಶ್ರೇಷ್ಠ ವ್ಯಸನವೆಂದು ನಂಬಿದ್ದ
ಗಾಂಧಿಯನ್ನು ಮಕ್ಕಳಿಗೆ ಪರಿಚಯಿಸುವ ರಂಗಪ್ರಯತ್ನವಿದು. ಹುತಾತ್ಮರ ದಿನದಂದು ಮಹಾತ್ಮರಿಗೆ ಅರ್ಪಿಸುವ ರಂಗನಮನ ಕೂಡಾ.
ನಿರ್ದೇಶನ: ವಾಸುದೇವ ಗಂಗೇರ
ರಂಗಪಠ್ಯ: ಉದಯ ಗಾಂವಕಾರ ಸಂಗೀತ ನಿರ್ವಹಣೆ: ಸದಾನಂದ ಬೈಂದೂರು
ರಂಗತಂಡ: ಸಮುದಾಯ, ಕುಂದಾಪುರ
ಸಹಕಾರ: ಸ.ಮಾ.ಹಿ.ಪ್ರಾ ಶಾಲೆ, ವಡೇರಹೋಬಳಿ
____________________
ಭಾಗವಹಿಸಿದವರು ಫೇಸಬುಕ್ನಲ್ಲಿ ವ್ಯಕ್ತಪಡಿಸಿದ ಅನಿಸಿಕೆಗಳು...
ಪಾಠಗಳು ರಂಗದ ಮೇಲೆ ಆವಿರ್ಭವಿಸುವ ಹೊಸ ಸಾಧ್ಯತೆಯನ್ನು ನಮ್ಮ ಮುಂದೆ ತೆರೆದಿಟ್ಟಿದ್ದು ಸಮುದಾಯ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಜಂಟಿಯಾಗಿ ಆಯೋಜಿಸಿದ 'ರಂಗ ಪಾಠ' ಎಂಬ ವಿಶಿಷ್ಟ 'ಸಮಾಲೋಚನಾ ಸಭೆ'ಯಲ್ಲಿ! (ದಿನಾಂಕ-30-01-2016)
'ಸಮಾಲೋಚನಾ ಸಭೆ'ಗಳನ್ನು ಈ ರೀತಿಯು ಆಯೋಜಿಸ ಬಹುದೆಂದು ತೋರಿಸಿಕೊಟ್ಟಿದ್ದಾರೆ. ಮಹಾತ್ಮ ಎಂಬ ನಾಟಕದ ಮೂಲಕ ಪಠ್ಯವನ್ನು ವಿಭಿನ್ನವಾಗಿ ನಾಟಕದ ರೂಪ ಪಡೆದ್ದದು ಎಲ್ಲರಿಗೂ ಖುಷಿ ಕೊಟ್ಟಿತು. ನೀರಸ ಬೋಧನೆಯ ತುಣುಕೊಂದು ನಮ್ಮ ಮುಂದೆ ವಿಭಿನ್ನವಾಗಿ ಮೂಡಿ ಬಂತು. ಬೆಂಚುಗಳು ರೈಲು ಬಂಡಿಯಾಯಿತು! ಮುರಿದ ಪೆಟ್ಟಿಗೆಯೊಂದು ಪ್ರಮುಖ ರಂಗ ಪರಿಕರವಾಗಿ ರೂಪಾಂತರಗೊಂಡಿತು. ಗಾಂದಿಜಿಯ ಜೀವನದ ಈ ಘಟನೆಗಳು ಆ ಮಕ್ಕಳ ಮನದಲಿ ಎಂದೂ ಅಳಿಸಲಾಗದ ಚಿತ್ರಗಳಾಗಿರುತ್ತವೆ ಎಂಬೂದರಲ್ಲಿ ಸಂದೇಹವಿಲ್ಲ. ಬಾಯಿಪಾಠದ ಸರಕಾಗಬಹುದಾಗಿದ್ದ ಪಠ್ಯವು ವಾಸುದೇವ ಗಂಗೇರ ಮತ್ತು ಉದಯ್ ಗಾಂವ್ಕರ ಅವರ ಮಾಂತ್ರಿಕ ಸ್ಪರ್ಶದಿಂದ ಹೊಸ ರೂಪ ತಾಳಿ ಪ್ರತಿಯೊಬ್ಬ ಶಿಕ್ಷಕನ ಕಣ್ಣ ಮುಂದೆ ಹೊಸ ದಾರಿಯೊಂದನ್ನು ತೆರೆದಿಟ್ಟಿತು.
4 ಗಂಟೆಗೆ ಕಾರ್ಯಕ್ರಮ ಮುಕ್ತಾಯವಾದರೂ ಇಲ್ಲಿಗೆ ಮುಗಿಯದೇ ಬೇರೆ ಬೇರೆ ಶಿಕ್ಷಕರ ಮನಗಳಲ್ಲಿ, ಶಾಲೆಗಳಲ್ಲಿ ಮರು ಹುಟ್ಟು ಪಡೆದು ವಿಭಿನ್ನವಾಗಿ ಮೂಡಿ ಬಂದೇ ತೀರುವುದು! ಈ ಕಾರ್ಯಕ್ರಮವನ್ನು ಆಯೋಜಿಸಿದ ಎಲ್ಲರಿಗೂ ಧನ್ಯವಾದವನ್ನು ಹೇಳುತ್ತೇನೆ.
ಇದನ್ನು ವೀಕ್ಷಿಸಲು ನಮ್ಮ ಶಾಲೆಯ ಕೆಲವು ಮಕ್ಕಳಿಗೆ ಅವಕಾಶ ಸಿಕ್ಕಿದ್ದು, ಚಿಕ್ಕ ನಾಟಕವನ್ನು ಆಡಲು ಅವಕಾಶ ದೊರೆತದ್ದು ಅವರ ಭಾಗ್ಯವೆಂದೇ ಹೇಳ ಬೇಕು.
-ಶ್ರೀಧರ ಐತಾಳ್, ಸ.ಹಿ.ಪ್ರಾ ಶಾಲೆ, ಮಚ್ಚಟ್ಟು
***
ಇವತ್ತು ಜೂನಿಯರ್ ಕಾಲೇಜು ಕೋಟೇಶ್ವರದಲ್ಲಿ BEO ಕಛೇರಿ,BRC ಮತ್ತು ಸಮುದಾಯ ಕುಂದಾಪುರ ಇವರ ಸಹಯೋಗದಲ್ಲಿ ಸೇವಾನಿರತ ಶೀಕ್ಷಕರಿಗಾಗಿ 'ರಂಗ ಪಾಠ' ಕಲಿಕೆಗಾಗಿ ರಂಗಭೂಮಿ ಎನ್ನುವ ಕಲ್ಪನೆಯಲ್ಲಿ ಉದಯ ಗಾಂವಕಾರರ ಸಂಯೋಜನೆಯಲ್ಲಿ ನಡೆಯಿತು.
ಒಟ್ಟು ಬೇರೆ ಬೇರೆ ಶಾಲೆಯ ಮಕ್ಕಳು ಪ್ರದರ್ಶಿಸಿದ ನಾಲ್ಕು ನಾಟಕಗಳು ಪ್ರದರ್ಶನಗೋಂಡವು. ಹೆಸ್ಕೂತ್ತುರು ಶಾಲೆಯ 'ಅಧ್ವಾನಪುರ,' ಮಚ್ಚಟ್ಟು ಶಾಲೆಯ 'ಈ ಭೂಮಿನಮ್ಮೊಬ್ಬರದೇ ಅಲ್ಲ,' ಬೈಲೂರು ಶಾಲೆಯ ' ಮಾಯದ ಕುದುರೆ' ಮತ್ತು ಸಮುದಾಯದವರು ವಡೇರ್ ಹೋಬಳಿ ಮಕ್ಕಳ ಮೂಲಕ ಮಾಡಿಸಿದ 'ಮಹಾತ್ಮ ' ಎಲ್ಲವು ರಂಗ ವಿನ್ಯಾಸ, ಕಥೆ, ಬಳಸಿದ ಪರಿಕರ ಒಂದಕ್ಕಿಂತ ಒಂದು ಭಿನ್ನವಾಗಿದ್ದವು. ಈ ನಾಟಕಗಳು ಶಿಕ್ಷಕರಿಗೆ ಕಡಿಮೆ ಖರ್ಚಿನಲಗಲ್ಲಿ ನಾಟಕ ಮಾಡಬಹುದು ಮತ್ತು ಪಠ್ಯವನ್ನು ಲಭ್ಯವಿರುವ ಪರಿಕರಗಳ ಮೂಲಕ ನಾಟಕ ಮಾಡಬಹುದು ಎಂಬ ಭರವಸೆಯನ್ನು ಹುಟ್ಟಿಸಿದವು.
ಆನಂದ ತಪ್ಪಲು, ಸ.ಹಿ.ಪ್ರಾ ಶಾಲೆ, ಬೈಲೂರು
***
Its a beautiful opportunity for our school students and of other two schools..bailoor and machchattu....thankful to samudaya kundapura and uday gaonkar sir...expecting some more useful educational experiments ahead...
ಅಶೋಕ ಹೆಸ್ಕತ್ತೂರು, ಸ.ಹಿ.ಪ್ರಾ ಶಾಲೆ, ಹೆಸ್ಕತ್ತೂರು