ಬುಡಕಟ್ಟು ಉತ್ಸವ: ಮಾಗಿ ಚಳಿಗೆ ಬುಡಕಟ್ಟು ಜನಾಂಗದವರ ನೃತ್ಯ ಮೋಡಿ    ನಗರ ಸಂಸ್ಕೃತಿಯ ಪ್ರಭಾವದಿಂದ ತಪ್ಪಿಸಿಕೊಂಡು ದಟ್ಟಕಾಡು ಮೇಡುಗಳಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ದ್ವೀಪಗಳಲ್ಲಿ ವಾಸಿಸುತ್ತ ತಮ್ಮದೇ ಆದ ಆಚಾರ-ವಿಚಾರ, ಭಾಷೆ, ದೈವ, ಮೂಲಪುರುಷ, ನಂಬಿಕೆ- ಆಚರಣೆ, ಉಡುಗೆ-ತೊಡುಗೆ, ಮಾಟ ಮಂತ್ರ, ಆಹಾರ, ಪಾನೀಯಗಳನ್ನೂ ನಿರ್ದಿಷ್ಟ ಸಾಮಾಜಿಕ ಕಟ್ಟುಪಾಡುಗಳನ್ನೂ ರೂಪಿಸಿಕೊಂಡು ಬದುಕುತ್ತಿರುವವರಿ ಬುಡಕಟ್ಟು ಜನಾಂಗದವರು.
    ಬುಡಕಟ್ಟು ಜನಾಂಗದವರಲ್ಲಿ ಸಂಬಂಧಗಳು ಗಾಢವಾಗಿರುತ್ತದೆ. ವ್ಯಕ್ತಿ ವ್ಯಕ್ತಿಗಳ ಸಂಬಂದಕ್ಕೆ ಇಲ್ಲಿ ಎಲ್ಲಿಲ್ಲದ ಮಹತ್ವವಿರುತ್ತದೆ. ಸಾಂಸ್ಕೃತಿಕವಾಗಿ ಅತ್ಯಂತ ಬಿಗಿಯಾದ ಮತ್ತು ಕಟ್ಟುನಿಟ್ಟಿನ ನಿಯಮಗಳಿದ್ದು, ಹೊರಗಿನವರನ್ನು ಅನುಮಾನದಿಂದಲೇ ನೋಡುವ ಪ್ರವೃತ್ತಿ ಇವರದ್ದು. ಈ ಸಾಮಾಜಿಕ ವರ್ಗಗಳ ಸಂಸ್ಕೃತಿ, ನಗರ ಮತ್ತು ಗ್ರಾಮೀಣ ಸಂಸ್ಕೃತಿಗಳಿಗಿಂತ ತೀರಾ ಭಿನ್ನವಾಗಿದೆ. ಈ ಜನರಿಗೆ ಪ್ರತ್ಯೇಕವಾದ ಭಾಷೆ ಮತ್ತು ಜೀವನ ಕ್ರಮಗಳಿರುತ್ತವೆ.
     ಇಂತಹ ವಿಶಿಷ್ಟತೆಯನ್ನು ಹೊಂದಿರುವ ಬುಡಕಟ್ಟು ಜನಾಂಗದವರಿಗೂ ಅವರದ್ದೇ ಆದ ನೃತ್ಯ ಪ್ರಕಾರಗಳಿರುತ್ತವೆ. ಸಂಭ್ರಮಕ್ಕೊಂದು ದುಖಃಕ್ಕೊಂದು ಎನ್ನುವ ನೃತ್ಯಗಳನ್ನು ಹೊಂದಿರುತ್ತಾರೆ. ವಾರ್ತಾ ಇಲಾಖೆ’ಯ ’ಬುಡಕಟ್ಟು ಉತ್ಸವ’ ಎನ್ನುವ ಹೆಸರಿನಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿರುವ ಬುಡಕಟ್ಟು ಜನಾಂಗದವರ ನೃತ್ಯಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿದೆ.
     ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಸೋಮವಾರ (ಜ. ೧೪) ಸಂಜೆ ೬.೩೦ಕ್ಕೆ ಇರುಳಿಗರು, ಜೇನುಕುರಬರು, ಸಿದ್ದಿಗಳು, ಹಕ್ಕಿಪಿಕ್ಕಿಯವರು, ದೇವರ ಗುಡ್ಡರು ಮತ್ತು ನಳಿಕೆಯವರು ತಮ್ಮ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲಿದ್ದಾರೆ. ಇವರಲ್ಲದೆ ವಿವಿಧ ಬುಡಕಟ್ಟು ಸಮುದಾಯಕ್ಕೆ ಸೇರಿದ ಸುಮಾರು ೧೦೦ ಮಂದಿ ಬುಡಕಟ್ಟು ಜನಾಂಗದವರು ತಮ್ಮಲ್ಲಿರುವ ಪ್ರತಿಭೆಯನ್ನು ಇಲ್ಲಿ ಅನಾವರಣಗೊಳಿಸಿದ್ದಾರೆ.
      ವಾರ್ತಾ ಇಲಾಖೆಯು ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದೆ. ಇಲಾಖೆಯ ನಿರ್ದೇಶಕ ಎನ್. ಆರ್. ವಿಶುಕುಮಾರ್ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿದೆ. ಸಿ. ಬಸವಲಿಂಗಯ್ಯ, ಕೆ. ಶಿವರುದ್ರಯ್ಯ, ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ಅಮರದೇವ ಇದನ್ನು ನಿರ್ದೇಶಿಸಿದ್ದಾರೆ. ಹೆಚ್.ಕೆ. ದ್ವಾರಕನಾಥ್ ಅವರು ಕಲಾನಿರ್ದೇಶನ ಮತ್ತು ಇಸ್ಮಾಯಿಲ್ ಗೊನಾಳ್ ಅವರು ಸಂಗೀತ ನೀಡಿದ್ದಾರೆ. ನಂದಕಿಶೋರ್ ಅವರು ಬೆಳಕು ಹಾಗೂ ರಂಗಸಜ್ಜಿಕೆಯನ್ನು ಶಿವಪ್ರಸಾದ್ ಅವರು ಮಾಡಿದ್ದಾರೆ.


ಬುಡಕಟ್ಟು ಉತ್ಸವದಲ್ಲಿ ಭಾಗವಹಿಸುತ್ತಿರುವ ಬುಡಕಟ್ಟು ಜನಾಂಗದವರು ಹಿನ್ನೆಲೆ


ಇರುಳಿಗರು: ಮಾಗಡಿಯಿಂದ ರಾಮನಗರ ಸೇರಿದಂತೆ ಕನಕಪುರದವರೆಗೆ ಹರಡಿಕೊಂಡಿರುವ ಇರುಳಿಗರನ್ನು ಕಾಡು ಪೂಜಾರಿಗಳು ಎಂದೂ ಸಹ ಗುರುತಿಸುತ್ತಾರೆ. ಇರುಳಿಗರು ಈ ಪದದ ಮೂಲ ರೂಪ ಇಲ್ಲಿಗರು ಕಾರಣ ಈ ಜನಾಂಗವು ಕಾಡು ಇಲಿಗಳನ್ನು ತಮ್ಮ ಆಹಾರಕ್ಕಾಗಿ ಬಳಸುತ್ತಿದ್ದರು. ಆದ್ದರಿಂದ ಇವರನ್ನು ಇಲ್ಲಿಗರು ಎಂದು ಕರೆಯುತ್ತಾರೆ. ಕಾಡುಗಳಲ್ಲಿ ಇರುವುದರಿಂದ ಕಾಡು ಪೂಜಾರಿಗಳೆಂದು ಕರೆಯುತ್ತಾರೆ. ಇರುಳಿಗರ ಮೂಲ ಕಲೆಯು ಕೈಕಣಿ ಹೇಳುವುದಾಗಿದೆ.

ಜೇನು ಕುರುಬ: ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ, ಹುಣಸೂರು ತಾಲ್ಲೂಕು, ಕೊಡುಗು ಜಿಲ್ಲೆಯ ಕುಶಾಲನಗರ, ಸೋಮವಾರಪೇಟೆ ಮತ್ತು ಮಡಿಕೇರಿ ತಾಲ್ಲೂಕುಗಳಲ್ಲಿ ತಲೆತಲಾಂತರದಿಂದ ವಾಸಿಸುವ ಜೇನು ಕುರುಬರು ತಲತಲಾಂತರದಿಂದ ಆನೆ ಹಿಡಿದು ಪಳಗಿಸುವುದರಲ್ಲಿ ನಿಪುಣರಾಗಿದ್ದಾರೆ. ಮೈಸೂರು ದಸಾರದಲ್ಲಿ ವಿಜಯದಶಮಿಯಂದು ಆನೆ ಅಂಬಾರಿ ನಡೆಸುವವರು ಇವರೇ. ಜೇನು ಕೀಳುವುದನ್ನು ಮೂಲ ಕಸುಬನ್ನಾಗಿಸಿಕೊಂಡಿರುವವರನ್ನು ಜೇನುಕುರುಬರು ಎಂದು ಕರೆಯುತ್ತಾರೆ.

ಸಿದ್ದಿ: ಇವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲ, ಯಲ್ಲಾಪುರ, ಶಿರಸಿ, ಹಳಿಯಾಳ, ಮುಂಡಗೋಡು ತಾಲ್ಲೂಕುಗಳ ಹಳ್ಳಿಗಳಲ್ಲಿ ಮತ್ತು ಸುತ್ತಮುತ್ತಲಿನ ಗುಡ್ಡಗಾಡುಗಳಲ್ಲಿ ವಾಸವಾಗಿದ್ದಾರೆ. ಇವರದ್ದು ದಪ್ಪತುಟಿ, ಚಪ್ಪಟೆ ಮೂಗು, ಚಿಕ್ಕಹಣೆ, ಒರಟಾದ ಗುಂಗುರು ಕೂದಲು, ಕಪ್ಪು ಬಣ್ಣ, ಎತ್ತರದ ಮೈಕಟ್ಟು. ಇವರು ನಿಗ್ರೋ ಜನಾಂಗಕ್ಕೆ ಸೇರಿದವರೆಂದು ಇವರ ಚಹರೆಯಿಂದ ತಿಳಿದುಬರುತ್ತದೆ. ಸಿದ್ದಿನಾಸ ಎಂಬ ತಮ್ಮ ಮೂಲದೈವದಿಂದ ಈ ಹೆಸರು ಬಂತೆಂದು ಸಿದ್ದಿಗಳು ಹೇಳುತ್ತಾರೆ.

ಹಕ್ಕಿಪಿಕ್ಕಿ: ಇವರ ಮೂಲವಾಸಸ್ಥಾನ ರಾಜಸ್ಥಾನದ ’ಬಾಗ್ರಾ’ ಎಂಬ ಸ್ಥಳ. ಆದ್ದರಿಂದಲೇ ಇವರನ್ನು ತಮ್ಮ ವಾಗ್ರಿ (ಬಾಗ್ರಿ) ಎಂದು ಕರೆದುಕೊಳ್ಳುತ್ತಾರೆ. ಕರ್ನಾಟಕದ ಗುಲ್ಬರ್ಗಾ, ಬೀದರ್, ಬಿಜಾಪುರ, ಬಳ್ಳಾರಿ, ಧಾರವಾಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸವಾಗಿದ್ದಾರೆ. ಬೇಟೆಯನ್ನೇ ಅವಲಂಬಿಸಿದ ಸಮುದಾಯವಿದು. ಬೇಟೆಯಾಡುತ್ತಾ ಅದರ ಮೂಲ ಉತ್ಪನ್ನಗಳನ್ನು ಮಾರಾಟ ಮಾಡುತ್ತಾ ಊರಿಂದ ಊರಿಗೆ ಹೋಗಿ ಬಿಡಾರ ಹಾಕುತ್ತಾ ಬದುಕುವ ಮಂದಿ ಇವರು. ತಮ್ಮ ದನಕರು ಹಾಡು ಹೆಂಡತಿ ಮಕ್ಕಳೊಂದಿಗೆ ಊರೂರು ತಿರುಗುತ್ತಾರೆ.

ನಾಯಕರು / ದೇವರ ಗುಡ್ಡರು: ಮಲೈ ಮಹದೇಶ್ವರನ ಭಕ್ತರಾದ ದೇವರ ಗುಡ್ಡರು, ಬೀಸು ಕಂಸಾಳೆ ವೃತ್ತಿಯನ್ನು ಮಾಡುತ್ತಾರೆ. ಈ ನೃತ್ಯವು ಮೈಸೂರು ಜಿಲ್ಲೆ, ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ನಾಯಕ ಜನಾಂಗದವರು, ಉಪಾರ ಜನಾಂಗದವರು, ಈ ನೃತ್ಯವನ್ನು ಅನಾದಿಕಾಲದಿಂದಲೂ ವಂಶಪಾರಂಪರ್ಯವಾಗಿ ಮಾಡುತ್ತಾ ಬರುತ್ತಿದ್ದಾರೆ. 

ನಲಿಕೆ (ಶಿರಾಡಿ ಭೂತ) : ತುಳು ನಾಡಿನಲ್ಲಿ ಅನೇಕ ಕಡೆ, ಅನೇಕ ಭೂತಗಳನ್ನು ನಡೆಸುತ್ತಾರೆ ಮತ್ತು ಅನೇಕ ದೈವಗಳನ್ನು ಆಚರಿಸುತ್ತಾರೆ. ತುಳು ನಾಡಿನಲ್ಲಿ ಜನಪ್ರಿಯವಾದ, ದೈವವಾದ ಶಿರಾಡಿ ಭೂತದ ನೃತ್ಯವನ್ನು ಜಾನಪದ ರೂಪದಲ್ಲಿ ನಲಿಕೆ ಜನ ಪ್ರದರ್ಶನ ಮಾಡುತ್ತಾರೆ. ಹೆಚ್ಚಾಗಿ ಇವರು ಕೊಡಗು ಜಿಲ್ಲೆಗಳಲ್ಲಿ ನೆಲೆಸಿದ್ದಾರೆ.