ಪಾಠ ಮತ್ತು ನಾಟಕ

ಹಾಗೆ ನೋಡಿದರೆ ನಿಜವಾದ ಶಾಲೆಯೊಂದರ ಚಟುವಟಿಕೆ, ರಂಗ ಚಟುವಟಿಕೆಯ ಸ್ವರೂಪವನ್ನೇ ಹೊಂದಿರುತ್ತದೆ. ರಂಗ ಭೂಮಿಯಲ್ಲಿ ನಟ ಪಠ್ಯವೊಂದನ್ನು ಪ್ರೇಕ್ಷಕರಿಗೆ ಸಂವಹಿಸುತ್ತಾನೆ, ಮುಟ್ಟಿಸುತ್ತಾನೆ ಇನ್ನೂ ವಿಶಾಲ ಅರ್ಥದಲ್ಲಿ ಸಂಸ್ಕಾರಗೊಳಿಸುತ್ತಾನೆ. ತರಗತಿಗಳಲ್ಲಯೂ ಅಷ್ಟೇ. ಶಿಕ್ಷಕ ಪಠ್ಯವನ್ನು ವಿದ್ಯಾರ್ಥಿಗಳಿಗೆ ಸಂವಹಿಸುತ್ತಾನೆ, ಮುಟ್ಟಿಸುತ್ತಾನೆ. ಈ ಮುಟ್ಟಿಸುವ, ತಲುಪಿಸುವ, ಉದ್ದೀಪಿಸುವ ಕ್ರಿಯೆಯನ್ನೇ ರಂಗಕ್ರಿಯೆಯ ಮೂಲ ಮಾದರಿ ಎನ್ನಬಹುದು. ಈ ನೆಲೆಯಲ್ಲಿ ಇವೆರಡೂ ಒಂದೇ.
ಶಿಕ್ಷಣ ಕ್ಷೇತ್ರ ಸಂವಹನದ ಭಿನ್ನ ಭಿನ್ನ ಸಾಧ್ಯತೆಗಳನ್ನು ಹುಡುಕಿಕೊಳ್ಳುತ್ತಲೇ ಇರುತ್ತದೆ.

  ರಂಗಭೂಮಿಯ ಅಂತಿಮ ಗುರಿ ಸಂವಹನದ ಅಂತಿಮ ಸಾಧ್ಯತೆಯೇ ಆಗಿದೆ. ಅದಕ್ಕಾಗಿ ಅನೇಕ ಮಾರ್ಗಗಳನ್ನು, ಅಭಿನಯದ ಹಲವು ಸಾಧ್ಯತೆಗಳನ್ನು ಅದು ಹುಡುಕಿಕೊಳ್ಳುತ್ತಲೇ ಇರುತ್ತದೆ. ಅಂದರೆ ಶಿಕ್ಷಣ ಮತ್ತು ರಂಗಭೂಮಿಯ ಹೊಕ್ಕುಳ ಬಳ್ಳಿ ಒಂದೇ ಆಗಿದೆ. ಇದನ್ನು ಅರಿತರೆ ರಂಗಭೂಮಿಗಿರುವ ಆಕರ್ಷಕತೆ, ರಂಜಕತೆ, ಅನುಭೂತಿ, ದೀಪ್ತಿ ಇವೆಲ್ಲವನ್ನು ಪರಿಣಾಮಕಾರಿಯಾಗಿ ತರಬೇತಿಯ ಬೋಧನೆಯಲ್ಲಿ ತರಲು ಸಾಧ್ಯ. 

  ಮಕ್ಕಳ ಸರ್ವಾಂಗೀಣ ವಿಕಾಸವೇ ಗುರಿಯಾಗಿ ಉಳ್ಳ ಶಿಕ್ಷಣ ಕ್ಷೇತ್ರ ವಿಕಾರವಾಗಿ ಮಕ್ಕಳ ದೇಹದ ಕೆಲವು ಅಂಗಗಳನ್ನಷ್ಟೇ ಬೆಳೆಸುತ್ತಿರುವ ಈ ಸಂದರ್ಭದಲ್ಲಿ ರಂಗಭೂಮಿ ಇದಕ್ಕೊಂದಿಷ್ಟು ಕಾಯಕಲ್ಪ ತರಬಹುದೆಂಬ ಆಸೆಯಿಂದ ಪಾಠಗಳನ್ನೂ ನಾಟಕಗಳನ್ನೂ ಒಂದಾಗಿಸುವ ಪ್ರಯತ್ನ ಇತ್ತೀಚೆಗೆ ಆರಂಭಗೊಂಡಿದೆ.

ಪಾಠ ಮತ್ತು ನಾಟಕಗಳ ಈ ಐಕ್ಯತೆಯನ್ನು ನಾವು ಎರಡು ರೀತಿಯಲ್ಲಿ ಸಾಧಿಸಬಹುದಾಗಿದೆ.

1. ಪಾಠ ನಾಟಕಗಳನ್ನು ಸಿದ್ದಪಡಿಸುವುದು.


2. ನಾಟಕದ ಅಂಶಗಳನ್ನು , ರಂಗಾಂಶಗಳನ್ನು ದಿನನಿತ್ಯದ ಪಠ್ಯ ಬೋಧನೆಯಲ್ಲಿ ಒಳಗೊಳ್ಳುವುದು.

ಪಾಠ ನಾಟಕದಲ್ಲಿ ಪಠ್ಯವೊಂದನ್ನು, ಅದು ವ್ಯಕ್ತಿ ಚಿತ್ರವಾಗಿರಲಿ, ಕತೆ ಇರಲಿ, ಕಾವ್ಯ ಇರಲಿ ಅದನ್ನು ಶಿಕ್ಷಕ ವಿದ್ಯಾರ್ಥಿಗಳ ಜತೆ ಚರ್ಚಿಸುತ್ತ ಪ್ರದರ್ಶನ ಪಠ್ಯವಾಗಿಸುತ್ತಾನೆ. ತರಗತಿ ಕೋಣೆ ಅಥವಾ ಹೊರಗಿನ ಬಯಲು ಪ್ರದರ್ಶನ ಸ್ಥಳವಾಗುತ್ತದೆ. ಖುರ್ಚಿ, ಮೇಜು, ಬೇಂಚುಗಳಂತಹ ಲಭ್ಯ ಪರಿಕರಗಳೆಲ್ಲ ರಂಗ ಪರಿಕರಗಳಾಗುತ್ತವೆ. ಪಠ್ಯದ ನಿರ್ಜೀವ ಸಾಲುಗಳೆಲ್ಲ ವಿದ್ಯಾರ್ಥಿಗಳ ದೇಹದಲ್ಲಿ ಸಜೀವಗೊಳ್ಳುತ್ತ ಪ್ರದರ್ಶನ ಸಿದ್ದಗೊಳ್ಳುತ್ತದೆ. 

ತರಗತಿಯ ಒಂದು ಗುಂಪು ಈ ಪ್ರದರ್ಶನವನ್ನು ನೀಡುತ್ತದೆ. ತರಗತಿಯ ಉಳಿದ ವಿದ್ಯಾರ್ಥಿಗಳು ಅದನ್ನು ವೀಕ್ಷಿಸುತ್ತಾರೆ. ನಂತರದ ಗುಂಪು ಚರ್ಚೆಯಲ್ಲಿ ಅದನ್ನು ವಿಶ್ಲೇಷಿಸುತ್ತಾರೆ. ನಂತರ ಅದೇ ಪಠ್ಯದ ಇನ್ನೊಂದು ಪ್ರದರ್ಶನವನ್ನು ಇನ್ನೊಂದು ಗುಂಪು ನೀಡುತ್ತದೆ.

ಇಲ್ಲಿ ಬಹಳ ಮುಖ್ಯವಾಗಿ ನಡೆಯುವ ಕ್ರಿಯೆ ರೂಪಾಂತರಕ್ಕೆ ಸಂಬಂಧಿಸಿದ್ದು. ಪಾಠವೊಂದು ಪ್ರದರ್ಶನ ಪಠ್ಯವಾಗುವುದು. ಬೇಂಚುಗಳು - ಪ್ಲಾಟ್ ಫಾರ್ಮ ಆಗುವುದು. ಶಿಕ್ಷಕರ ಕೈಯ ಬೆತ್ತ ಕುದುರೆಯಾಗುವುದು, ಡಸ್ಟರ್ ಚೆಂಡಾಗುವುದು ಹೀಗೆ ಇನ್ನೇನೋ ಆಗುವುದು. ಪ್ರಾಕೃತಿಕ ಬೆಳಕು ಹೊಸ ಬಣ್ಣ ಪಡೆಯುವುದು. ಒಂದೇ ಬಗೆಯ, ನಿರಂತರ ಬಳಕೆಯಿಂದ ಬೋರು ಹೊಡೆಸುವ ತರಗತಿ ಕೋಣೆ ಮಾಂತ್ರಿಕ ಸ್ಥಳವಾಗಿ ಹೊಸದಾಗಿ ಕಾಣುವುದು. ವ್ಯಾಯಾಮದಲ್ಲಿ ಬಳಕೆಯಾಗುವ ಬ್ಯಾಂಡ್ ಸೆಟ್ ರಂಗ ಸಂಗೀತದಲ್ಲಿ ಹೊಸ ನಾದ ಹೊಮ್ಮಿಸುವುದು. ಡಂಬೆಲ್ಸ್‍ನ ಕಟ್ಟಿಗೆ ತುಂಡು ಕುದುರೆ ಓಟದ ಸದ್ದು ಹುಟ್ಟಿಸುವುದು. ಸೀರೆ,ವೇಲ್ ಇವೆಲ್ಲ ನದಿಯಾಗುವುದು, ಗುಡ್ಟವಾಗುವುದು. ಹೀಗೆ ನೂರಾರು ಸಾಧ್ಯತೆಗಳು ಈ ಮುರಿದು ಕಟ್ಟುವ ಕ್ರಿಯೆಯಲ್ಲಿ ರೂಪಾಂತರದಲ್ಲಿ ಜರುಗುತ್ತದೆ. ಭೂಗೋಲದಂತಹ ಪಾಠಗಳಲ್ಲಿ ತರಗತಿಯ ಹೊರಗಿನ ಬಯಲನ್ನು ಖಂಡಗಳಾಗಿ, ಪ್ರಪಂಚದ ಭೂಪಟವಾಗಿ ಬಳಸಿ ಖಂಡಾಂತರಗಳ ಪ್ರವಾಸ ಸಂಘಟಿಸಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಕಣ್ಣೆದುರಿನ ಬಯಲಲ್ಲೆ ಆಫ್ರಿಕವನ್ನು ಕಾಣಲು, ಅಲ್ಲಿಯ ಉಬ್ಬು ತಗ್ಗುಗಳಲ್ಲಿ ಸರೋವರ, ಸಮುದ್ರಗಳನ್ನು ಕಾಣಲು ಹೀಗೇ ಹೀಗೆ ಅನೇಕ ಸಾಧ್ಯತೆಗಳು ಇಲ್ಲಿ ಕಾಣಸಿಗುತ್ತದೆ.

ಸಾಂಪ್ರದಾಯಿಕ ಬೋಧನೆಯಲ್ಲಿ ಪಠ್ಯಕ್ಕೆ ಶಿಕ್ಷಕ ಹೇಳಿದ ಒಂದೇ ಅರ್ಥ ಪಠ್ಯಕ್ಕೆ ದಕ್ಕಿದರೆ ಪ್ರದರ್ಶನದ ವಿವಿದ ಸಾಧ್ಯತೆಗಳನ್ನು ಅವಲಂಬಿಸಿ ಸಾಂಪ್ರದಾಯಿಕ ಪಠ್ಯಕ್ಕೂ ಹಲವು ಅರ್ಥಗಳು ಲಭ್ಯವಾಗುತ್ತವೆ. ಪ್ರದರ್ಶನದಲ್ಲಿ ಇರುವ ಅವಕಾಶ, ಚಲನೆ, ಸಂಗೀತ, ಸಂಭಾಷಣೆ ಇವೆಲ್ಲ ಸೇರಿ ಕಲಿಕೆಯನ್ನು ಅನುಭವವನ್ನಾಗಿಸುತ್ತದೆ. ಕಲಿಕೆ ಆಟವಾಗುತ್ತ, ಈ ಆಟಗಳು ಅವರ ವ್ಯಕ್ತಿತ್ವದ ಆಳಕ್ಕೆ ಇಳಿಯಲು ನೆರವಾಗುತ್ತದೆ; ರಂಗಭೂಮಿಯಲ್ಲಿ ನಟ - ಪಠ್ಯ - ಪ್ರೇಕ್ಷಕ ಒಂದಾಗಿ ಕರಗುವ ಹಾಗೆ.

ಹೀಗೆಂದ ಮಾತ್ರಕ್ಕೆ ಎಲ್ಲ ಪಾಠಗಳನ್ನು ನಾಟಕವಾಗಿ ಪ್ರದರ್ಶಿಸುತ್ತ ಸಾಗಬೇಕೆಂದಿಲ್ಲ. ಅದು ಇಂದಿನ ವ್ಯವಸ್ಥೆಯಲ್ಲಿ ಸಾಧ್ಯವೂ ಅಲ್ಲ, ಸಾಧುವೂ ಅಲ್ಲ. ಇಲ್ಲಿ ಬಳಕೆಗೆ ಬರುವುದು ರಂಗಾಂಶಗಳನ್ನು, ರಂಗ ತಂತ್ರಗಳನ್ನು ದೈನಂದಿನ ಬೋಧನೆಯಲ್ಲಿ ಬಳಸಿಕೊಳ್ಳುವ ಸಾಧ್ಯತೆಗಳು. ಇಲ್ಲಿ ಬಳಕೆಯಾಗುವುದು ರಂಗ ಭಾಷೆ. ರಂಗಭಾಷೆಗೆ ಬಹು ಸಾಧ್ಯತೆಗಳು. ಶ್ರವ್ಯ - ದೃಶ್ಯ ಈ ಎಲ್ಲ ಗುಣಗಳೂ ಈ ಭಾಷೆಗಿದೆ. ಇಲ್ಲಿ ಮಾತು ಕೂಡ ಆಭಿನಯವೇ. ಅಭಿನಯ ಅಂದರೇನೆ ‘ಹತ್ತಿರಕ್ಕೆ ಒಯ್ಯು’. ಅಂತ. ವಾಚಿಕ, ಆಂಗಿಕ, ಆಹಾರ್ಯ ಇವೆಲ್ಲ ರಂಗಭಾಷೆಯ ವಿವಿಧ ಅಂಗಗಳು. ಶಿಕ್ಷಕ ವಾಚಿಕಾಭಿನಯವೊಂದನ್ನೇ ಸರಿಯಾಗಿ ಅರಿತುಕೊಂಡರೂ ಪಠ್ಯವನ್ನು ಪರಿಣಾಮಕಾರಿಯಾಗಿಸಲು ಸಾಧ್ಯ. ಇಂತ ಬಗೆಯ ಓದು, ದನಿಯ ವಿವಿಧ ಸ್ತರಗಳ ಬಳಕೆ (ರಂಗಭೂಮಿಯಲ್ಲಿ Sಠಿeeಛಿh ತಿoಡಿಞ ಅಂತಲೇ ತರಬೇತಿ ಇದೆ.) ಅಂಗಿಕ ಬಳಕೆ, ತರಗತಿ ಕೋಣೆಯ ಆಹಾರ್ಯಗಳು ಅಲ್ಲಿಯ ಪರಿಕರಗಳು. ಅದರ ಕಲಾತ್ಮ,ಕ ಬಳಕೆ, ಮೇಜು, ಖುರ್ಚಿ, ಡಯಾಸ್‍ಗಳ ಬ್ಯಾಲೆನ್ಸ್, ವಿದ್ಯಾರ್ಥಿಗಳ ನಡುವಿನ ಶಿಕ್ಷಕನ ಚಲನೆ; ಮೂವ್‍ಮೆಂಟ್ ಶಿಕ್ಷಕನ ನಿಲುವು, ವಿದ್ಯಾರ್ಥಿ ಮತ್ತು ಶಿಕ್ಷಕನ ನಡುವಿನ ‘ಎನರ್ಜಿ ಲೈನ್’ನ ಕಟ್ಟಿಕೊಳ್ಳುವಿಕೆ, ಕಾದುಕೊಳ್ಳುವಿಕೆ ಇವೆಲ್ಲ ರಂಗಭಾಷೆಗೆ ಸಂಬಂಧಿಸಿದ್ದು. ಹೀಗಾಗಿ ಇದನ್ನು ಅರಿತು ಬಳಸಿಕೊಳ್ಳುವ ಶಿಕ್ಷನ ಮಾತಿಗೆ ಚಿತ್ರಕ ಶಕ್ತಿ ಒದಗುತ್ತದೆ. ಉಳಿದ ಸಂದರ್ಭಗಳಲ್ಲಿ ಮಾತು, ಮಾಹಿತಿ ನೀಡುವುದಕ್ಕೆ ಮಾತ್ರ ಬಳಕೆಗೊಂಡರೆ ಈ ಸಂದರ್ಭದ ಒಳಗಡೆ ಮಾತು ಏನನ್ನೋ ತೋರುವುದಕ್ಕೆ ನೆರವಾಗುತ್ತದೆ.

ಪಾಠ ಮತ್ತು ನಾಟಕದ ಈ ಐಕ್ಯತೆ ಕೇವಲ ಪಠ್ಯವೊಂದರ ಬೋಧನೆಯ ಅಗತ್ಯವನ್ನು ಮಾತ್ರವಲ್ಲ, ಶಿಕ್ಷಣದ ಮೂಲಕ ನಾವು ಏನನ್ನು ಸಾಧಿಸಬೇಕು ಎಂದು ಕೊಂಡಿದ್ದೇವೆಯೋ, ಪಠ್ಯಕ್ರಮದ ಹಿಂದಿನ ಆಶಯಗಳು ಏನಿವೆಯೋ ಅವನ್ನೂ ನಿರ್ವಹಿಸುತ್ತವೆ. ವ್ಯಕ್ತಿತ್ವ ವಿಕಸನದ ಅಪಾರ ಅವಕಾಶವನ್ನು ಒದಗಿಸುತ್ತದೆ. ಉದಾ : ಸಂಭಾಷಣೆಯ ಮೂಲಕ ಅಭಿವ್ಯಕ್ತಿಯನ್ನು ಪರಿಕರ, ಪ್ರದರ್ಶನದ ನಿರ್ವಹಣೆಯಿಂದ ಜವಾಬ್ದಾರಿನಿರ್ವಹಣಾ ಕೌಶಲ್ಯವನ್ನೂ, ತಾನಲ್ಲದ ಇನ್ನೊಂದು ಪಾತ್ರವಾಗುವುದರಿಂದ ರೂಪಾಂತರದ ಶಕ್ತಿಯನ್ನೂ ಮಾತ್ರವಲ್ಲದೇ ವಿದ್ಯಾರ್ಥಿ ಕಳೆದುಕೊಳ್ಳುವ ಶಿಗ್ಗು, ನಾಚಿಕೆ, ಪಡೆದುಕೊಳ್ಳುವ ಆತ್ಮವಿಶ್ವಾಸ, ವಿಶ್ಲೇಷಣೆ, ತರ್ಕವನ್ನು ಅರ್ಥೈಸಿಕೊಳ್ಳುವ, ಮತ್ತು ತರ್ಕವನ್ನು ಮುರಿಯುವ ಶಕ್ತಿ ಹೀಗೆ ಅನೇಕ.

ಶಿಕ್ಷಕ ಸಹ ಪಠ್ಯವನ್ನು ಪಾಠವಾಗಿಸುತ್ತ ಸಾಗುವಾಗ ಹೊಸ ಹೊಸ ಅರ್ಥ ಪಡೆದುಕೊಳ್ಳುತ್ತಾನೆ. ಇಂತಹ ಸಂದರ್ಬದಲ್ಲಿ ಮಾತ್ರವೇ ಶಿಕ್ಷಕ ವಿದ್ಯಾರ್ಥಗಳ ನಡುವೆ ಮಾನವೀಯ ಸಂಬಂಧ ಬೆಸೆಯಲು ಸಾಧ್ಯ; ವಿದ್ಯಾರ್ಥಿಗಳು ಪಠ್ಯದ ಕುರಿತು ಶಿಕ್ಷಕರಲ್ಲಿ ಚರ್ಚಿಸಲು ಸಾಧ್ಯ; ಗೋವಿನ ಹಾಡಿನ ಕೊನೆಗೆ ಹುಲಿಯಾಕೆ ಸಾಯಬೇಕೆಂಬ ಪ್ರಶ್ನೆ ವಿದ್ಯಾರ್ಥಿಗಳಿಂದ ಬರಲು ಸಾಧ್ಯ. ಆಗ ಆ ಪಾತ್ರಗಳನ್ನು ನಿರ್ವಹಿಸುವ ಹೊಸ ಸಾಧ್ಯತೆ ಕುರಿತು ಶಿಕ್ಷಕ ಚಿಂತಿಸಲು ಸಾಧ್ಯ. ಪಠ್ಯದ ಪಾತ್ರಗಳು ವಿದ್ಯಾರ್ಥಿಗಳಲ್ಲಿ ಜೀವ ಪಡೆಯುವುದರಿಂದ ಪಠ್ಯದ ಪಾತ್ರ ಮತ್ತು ವಿದ್ಯಾರ್ಥಿಗಳ ನಡುವೆ ಬೆಳೆವ ತಾದಾತ್ಮ್ಯ್ಮ್ಯವರಿಗೆ ಮಾನವೀಯ ಮುಖಗಳನ್ನು ಪರಿಚಯಿಸುತ್ತದೆ.

ಕೊನೆಯಲಿ ಒಂದು ಮಾತು. ನಾಟಕ ಬೋಧನೆ ತನಗೆ ತಾನೇ ಒಂದು ಶೈಕ್ಷಣಿಕ ಶಿಸ್ತಲ್ಲ. ಶಿಕ್ಷಣ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಶಿಕ್ಷಣ ತಜ್ಞ ಅನುಸರಿಸಬೇಕಾದ ಒಂದು ವಿಧಾನ ಮತ್ತು ಶೈಕ್ಷಣಿಕ ಶಿಸ್ತಿನ ಮಿತಿ ದಾಟಲು ಇರುವ ಒಂದು ಪರಿಣಾಮಕಾರಿ ಸಾಧನ. ಇದನ್ನು ಬಲು ಎಚ್ಚರಿಕೆಯಿಂದ ಜತನವಾಗಿ ಗಮನಿಸಿಕೊಳ್ಳಬೇಕು. ಶಿಕ್ಷಣದ ಸ್ಥಾಪಿತ ಹಿತಾಸಕ್ತಿಗಳು ಅಷ್ಟು ಸುಲಭವಾಗಿ ಇದನ್ನು ಒಪ್ಪುವುದಿಲ್ಲ. ಈ ಸೂಕ್ಷ್ಮದ ಕುರಿತು ಒಂದು ಉದಾಹರಣೆ ನೀಡುತ್ತೇನೆ. ತರಗತಿ ಕೋಣೆಯ ಒಳಗೆ ವಿದ್ಯಾರ್ಥಿಯೊಬ್ಬ ತಪ್ಪು ಮಾಡಿದರೆ ಅವನನ್ನು ಬೇಂಚು ಹತ್ತಿಸಿ ನಿಲ್ಲಿಸಲಾಗುತ್ತದೆ. ಬೇಂಚಿನ ಮೇಲೆ ನಿಲ್ಲುವುದು ಅಲ್ಲಿಯ ಸಂದರ್ಭದಲ್ಲಿ ಒಂದು ಶಿಕ್ಷೆ. ಆದರೆ ರಂಗಭೂಮಿಯಲ್ಲಿ ಬೇಂಚಿನ ಮೇಲೆ (ಪ್ಲಾಟ್ ಫಾರ್ಮ) ನಿಂತರೆ ಆತ ಮುಖ್ಯಪಾತ್ರ ಆಗಿಬಿಡುತ್ತಾನೆ.

ಪಾಠ ನಾಟಕದ ಸವಾಲುಗಳು ಮತ್ತು ಸಾಧ್ಯತೆಗಳು

ಕೆಲ ಟಿಪ್ಪಣಿಗಳು

ಶಿಕ್ಷಣದಲ್ಲಿ ರಂಗಭೂಮಿಯ ಕುರಿತು ಆರಂಭಗೊಂಡಿರುವ ಚರ್ಚೆಗಳಲ್ಲಿ ಮತ್ತೆ ಮತ್ತೆ ಪಾಠ ನಾಟಕಗಳು ಉಲ್ಲೇಖಿತಗೊಳ್ಳುತ್ತಿವೆ. ಪಾಠನಾಟಕಗಳ ಕುರಿತ ಹಲವು ಅಭಿಪ್ರಾಯಗಳು ಕೆಲವೊಮೆ ತಪ್ಪಾಗಿ, ಹಲವೊಮ್ಮೆ ಅತಿ ಸರಳೀಕರಣಗೊಂಡು ಎಲ್ಲೆಡೆ ಹರಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇವುಗಳ ಸವಾಲು ಮತ್ತು ಸಾಧ್ಯತೆಗಳ ಕುರಿತಾದ ಕೆಲವು ಕಿರು ಟಿಪ್ಪಣಿಗಳನ್ನು ಮಂಡಿಸುತ್ತಿದ್ದೇನೆ.

ಸವಾಲುಗಳು

1 ನಾಟಕಕ್ಕೆ ಇರುವ ಬೋಧನೆಯ ಗುಣಗಳು, ರಂಗಭೂಮಿಗಿರುವ ಶೈಕ್ಷಣಿಕ ಸ್ವರೂಪದ ಕಾರಣಕ್ಕಾಗಿ ಇಂದು ಶಿಕ್ಷಣದಲ್ಲಿ ರಂಗಭೂಮಿಯ ಪರಿಕಲ್ಪನೆ ಪಾಠ ಮತ್ತು ನಾಟಕ ಎಂಬ ಪದಗಳಲ್ಲಿ ಕಾಣಿಸಿಕೊಂಡು ಪಾಠನಾಟಕ ಎಂಬ ‘ಸಮಾಸ’ ಪದವಾಗಲು ಪ್ರಯತ್ನಿಸುತ್ತಿದೆ. ಆದರೆ ಇಂದಿನ ಶೈಕ್ಷಣಿಕ ರಂಗಭೂಮಿಯ ಕುರಿತಾದ ಚರ್ಚೆಗಳ ಹಿಂದಿನ ಗ್ರಹಿಕೆ ಇಷ್ಟು ‘ಮುಗ್ಧ’ ಎಂದು ನನಗನ್ನಿಸುವುದಿಲ್ಲ. ಇದಕ್ಕೆ ಇನ್ನೊಂದು ಮುಖವೂ ಇದೆ. ಅದರ ‘ಪಾಲಿಟಿಕ್ಸ್’ ಕುರಿತು ತಮ್ಮ ಗಮನ ಸೆಳೆಯಲು ಪ್ರಯತ್ನಿಸುತ್ತೇನೆ.

ನಿಜವಾದ ಶಿಕ್ಷಣ ಎಂದರೆ ದೇಹ ಮತ್ತು ಮನಸ್ಸುಗಳ ಸಾಧ್ಯತೆಗಳನ್ನು ವಿಸ್ತರಿಸುವದು. ಹೀಗಾದರೆ ಚಿತ್ರಕಲೆ, ನೃತ್ಯ, ಸಂಗೀತ ಇವೆಲ್ಲ ನಿಜವಾದ ಅರ್ಥದಲ್ಲಿ ಶಿಕ್ಷಣದ ಪಠ್ಯಗಳಾಗುತ್ತವೆ. ಆದರೆ ಇಂದು ಅದನ್ನು ನಾವು ‘ಸಹಪಠ್ಯ’ ಎನ್ನುತ್ತಿದ್ದೇವೆ. ಪ್ರತಿಭಾ ಕಾರಂಜಿಯ ಹೆಸರಿನಲ್ಲಿ ಈ ‘ಸಹಪಠ್ಯ’ಕ್ಕೆ ವರ್ಷಕ್ಕೊಂದು ಬಾರಿ ಭೂತಬಲಿ ನೀಡುತ್ತೇವೆ. ನಿಜವಾದ ಪಠ್ಯ ಬೇರೆಯೇ ಇದೆ. ಅದು ‘ಉಪಯೋಗ’ ಹಾಗೂ ‘ಉಪಭೋಗ’ ವಾದಕ್ಕೆ ಸಂಬಂಧಿಸಿದ್ದು. ಈ ಪಠ್ಯದ ಕಲಿಕೆ ಮುಖಗಂಟು ಹಾಕಿಕೊಂಡ, ಗಂಭೀರತನಕ್ಕೆ ಸಂಬಂಧಿಸಿದ್ದಾದರೆ, ಅಲ್ಲಿ ಅ ‘ಸಹಪಠ್ಯ’ ಕಲಿಕೆ ಚಟುವಟಿಕೆಯಾಗಿ ಆನಂದದಾಯಕತೆಗೆ ಸಂಬಂಧಿಸಿದೆ. ಈಗ ಆ ಆನಂದವನ್ನು ಈ ‘ಉಪಭೋಗ’ ಭಾಗದ ಪಠ್ಯಕ್ಕೆ ಕಸಿ ಮಾಡುವ ಪ್ರಯತ್ನವನ್ನೇ ಇಂದು ಪಾಠನಾಟಕ ಅಥವಾ ಶಿಕ್ಷಣದಲ್ಲಿ ರಂಗಭೂಮಿ ಎಂದು ಕರೆಯಲಾಗುತ್ತಿದೆ. ಆದ್ದರಿಂದ ಈ ಪಾಠನಾಟಕವೆಂಬ ಇಂದಿನ ಪರಿಕಲ್ಪನೆಯಲ್ಲಿಯೇ ಮೂಲಭೂತವಾದ ಸಮಸ್ಯೆಯಿದೆ. ಹಾಗಾಗಿ ಶಿಕ್ಷಣ ಕ್ಷೇತ್ರದವರು ರಂಗಭೂಮಿಯನ್ನು ದತ್ತುತೆಗೆದುಕೊಳ್ಳುವ ಮಾತನಾಡುತ್ತಿದ್ದಾರೆ. ವಿಜ್ಞಾನ, ಗಣಿತ ವಿಷಯಗಳ ಪಾಠವನ್ನು ನಾಟಕ ಮಾಡಲು ಕೇಳುತ್ತಾರೆ. ಏಕೆಂದರೆ ಅವರಿಗೆ ರಂಗಭೂಮಿ ಎನ್ನುವುದು ಅವರ ಪಠ್ಯ ಬೋಧನೆಯ ಒಂದು ಸಾಧನ; ಒಂದು ಟೆಕ್ನಿಕ್. ಆದರೆ ನನಗೋ ನನ್ನಂಥವರಿಗೋ ಅಲ್ಲ.

2 ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಈ ನಾಟಕ ಪರಿಕಲ್ಪನೆಯ ಬಗ್ಗೆ ಗುಮನಿ. ಅವರಿಗಿದು ‘ಅನ್ಯ’, ಫಾರಿನ್ ಬಾಡಿ. ಹಾಗಾಗಿ ಅವರು ‘ಪೋಲಿಸರು ಬರುತ್ತಿದ್ದಾರೆ ಎಚ್ಚರಿಕೆ’ ಎಂಬಂತೆ, ‘ನಾಟಕ ಶಿಕ್ಷಕರು ಬರುತ್ತಾರೆ ಎಚ್ಚರಿಕೆ’ ಎಂಬರ್ಥದ ಮಾತನಾಡುತ್ತಿದ್ದಾರೆ. ಅದೇ ಕಾಲಕ್ಕೆ ನಾಟಕದವರಿಗೆ ತಾವೊಬ್ಬ ‘ಶ್ರೇಷ್ಠ ಜೀವಿ’ಗಳು, ಶಿಕ್ಷಣ ರಂಗವನ್ನು ಉದ್ಧಾರ ಮಾಡಿಬಿಡುವವರು ಎಂಬ ಭ್ರಮೆ. ಹಾಗಾಗಿ ಇವೆರಡರ ಸೇರುವಿಕೆ ನಾವಂದುಕೊಂಡಂತೆ ಸುಲಭವಲ್ಲ. ಇಲ್ಲಿ ಈ ಎರಡೂ ಕ್ಷೇತ್ರದವರ ಅಸ್ತಿತ್ವದ ಪ್ರಶ್ನೆ ಇದೆ; üಮಾನದ ಪ್ರಶ್ನೆಯಿದೆ ಮತ್ತು ಮಾನಭಂಗದ ಪ್ರಶ್ನೆ ಇದೆ.

3 ತರಗತಿಯಲ್ಲಿ ಕೋಣೆಯಲ್ಲಿ ರಂಗಭೂಮಿಯ ಬಳಕೆ ಎಂದೊಡನೆ ಖುರ್ಚಿ, ಮೇಜು, ಬೇಂಚು ಎಂದೆಲ್ಲ ಹೇಳಿ, (ಅವುಗಳನ್ನು ಕಲಾತ್ಮಕವಾಗಿ ಬಳಕೆ ಮಾಡುವದಕ್ಕೂ ಪ್ರಯತ್ನಿಸದೇ) ಸರಳತೆಯ ಹೆಸರಿನಲ್ಲಿ ಬೋಳೆತನವನ್ನು ಪ್ರದರ್ಶಿಸಿ ರಂಗಭೂಮಿಗಿರುವ ‘ಫಾರ್ಮ’ನ ಕನಿಷ್ಟ ಸೌಂದರ್ಯವನ್ನೂ ಕಡೆಗಣಿಸುವ ಪ್ರಯತ್ನವನ್ನು ನಾವಿಂದು ನೋಡುತ್ತಿದ್ದೇವೆ. ಸರಳತನ ಅಂದ್ರೆ ಅದಕ್ಕೆ ಶಿಸ್ತಿದೆ; ಸೌಂದರ್ಯವಿದೆ.
      ಪಾಠ ಮತ್ತು ನಾಟಕ ಈ ಎರಡೂ ಕ್ಷೇತ್ರದಲ್ಲಿ ತುಂಬ ಆಳವಾದ ಅನುಭವ ಇರುವವರು ಮಾತ್ರ ಈ ಪ್ರಯತ್ನವನ್ನು ಸರಳವಾಗಿ ಆದರೆ ಅಷ್ಟೇ ಪರಿಣಾಮಕಾರಿಯಾಗಿ ಪ್ರಯೋಗಿಸಬಲ್ಲರು. ಇಲ್ಲವಾದರೆ ಅತ್ತ ಪಾಠವೂ ಆಗದ, ಇತ್ತ ಒಂದು ರಂಗಚಟುವಟಿಕೆಯೂ ಆಗದ, ಕ್ರಿಯೆಯೊಂದು ಏನೂ ಆಗದ ಹಾಗೆ ಆಗುತ್ತದೆ. ಅದಕ್ಕಿಂತ ಹೆಚ್ಚಾಗಿ ರಂಗಭೂಮಿಯ ಕುರಿತ ಅಪಕಲ್ಪನೆಗೆ ಇದು ದಾರಿಮಾಡಿಕೊಡುತ್ತದೆ. ಇದು ರಂಗಭೂಮಿಯ ವಿದ್ಯಾರ್ಥಿಗಳಾದ ನಮ್ಮಂತವರ ಸಂಕಟ.

4 ಪಾಠನಾಟಕವೆಂದರೆ ಕೇವಲ ಪಾಠಗಳನ್ನು ನಾಟಕ ಮಾಡುವುದು ಮಾತ್ರವಲ್ಲ. ತರಗತಿಕೋಣೆಗೆ ಶಿಕ್ಷಕನ ಪ್ರವೇಶ, ಕರಿಹಲಗೆಯ ಬಳಕೆ, ಡಯಾಸ್‍ಗಳ ನಿರ್ವಹಣೆ, ನಿಲುವು, ಸಮತೋಲನ, ಪುಸ್ತಕ ಮತ್ತು ವಿದ್ಯಾರ್ಥಿಗಳ ನಡುವಿನ ಚಲನೆ, ಧ್ವನಿ, ಸಹಜ ತರಗತಿಯನ್ನೇ ಒಂದು ಡೈನಾಮುಕ್ ಸ್ಪೇಸ್ ಆಗಿ ರೂಪಾಂತರಿಸುವ ಕುಶಲತೆ ಇವೆಲ್ಲವೂ ಹೌದು ಎಂದಾಗ ಇದರ ಅಗಾಧತೆ ಮತ್ತು ಕಷ್ಟ. ಇವೆರಡು ನಮ್ಮರಿವಿಗೆ ಬರಬಹುದು ಎಂದುಕೊಳ್ಳುತ್ತೇನೆ.

5 ನಮಗೆಲ್ಲ ಗೊತ್ತಿರುವಂತೆ ನಾಟಕಗಳಿಗೆ ರೂಪಕದ ಶಕ್ತಿ ಇರುತ್ತದೆ. . ಅಲ್ಲಿಯ ಹಲವಾರು ಕ್ರಿಯೆಗಳು ಸಾಂಕೇತಿಕವಾಗಿರುತ್ತದೆ. ಇವೆಲ್ಲವುಗಳ್ನು ಕಟ್ಟಿಕೊಳ್ಳುತ್ತಲೇ ಒಂದು ಅನುಭವವನ್ನು ಅವು ನಿರೂಪಿಸುತ್ತವೆ. ಈ ಅನುಭವಗಳು ನಿತ್ಯ ಜೀವನದ ವಾಸ್ತವಿಕ ತರ್ಕಗಳನ್ನು ನಿರಾಕರಿಸುತ್ತದೆ ಮತ್ತು ನಿಜವಾದ ಅನುಭವಗಳನ್ನು, ಭಾವಗಳನ್ನು ಅವು ತಾರ್ಕಿಕ ಸತ್ಯಕ್ಕಿಂತ ಮಿಗಿಲಾಗಿ ಕಟ್ಟಿಕೊಡುತ್ತದೆ.

   ಪಾಠ ನಾಟಕಗಳು ಪಠ್ಯಸತ್ಯಗಳನ್ನು ತಾರ್ಕಿಕವಾಗಿ ಕಾಣಿಸಲು ಹೋಗಿ ರಂಗಾನುಭವವನ್ನೇ ನಿರಾಕರಿಸುವ ಎಲ್ಲ ಸಾಧ್ಯತೆಗಳಿವೆ. ಹಾಗಾಗದಂತೆ, ಶುಷ್ಕ ವೈಚಾರಿಕತೆಗೆ ಅಂಟಿಕೊಳ್ಳದಂತೆ ಆದರೆ ಪಠ್ಯದ ಅನುಭವಗಳನ್ನು ರಂಗ ರೂಪಕದ ಮೂಲಕ ಕಟ್ಟಿಕೊಡಬೇಕು. ಇದು ದೊಡ್ಡ ಸವಾಲು.

ಸಾಧ್ಯತೆಗಳು

1 ಇಲ್ಲಿಯ ಪ್ರಯೋಗ ಎರಡು ರೀತಿಗಳಲ್ಲಿರುವುದು ಸಾಧ್ಯ.

1. ನೆರೇಶನ್ - ನಿರೂಪಣಾ ನಾಟಕ

2. ಸಾಂಪ್ರದಾಯಿಕ ನಟಕ

ಸ್ಥೂಲವಾಗಿ ಇವುಗಳನ್ನು ಪ್ರಕ್ರಿಯಾತ್ಮಕ ಮತ್ತು ಪ್ರದರ್ಶನಾತ್ಮಕ ಎಂದೂ ಹೇಳಬಹುದು. ತರಗತಿ ಕೋಣೆಯೊಳಗೆ ಪಠ್ಯದ ಪದ ಪದಗಳನ್ನೂ ನಿರೂಪಿಸುತ್ತ, ಆಶು ವಿಸ್ತರಣೆಗೆ ಅನುವು ಮಾಡಿಕೊಡುತ್ತ , ಕ್ರಿಯೆಗಳ ಅಭಿನಯವನ್ನು ಕಲಿಯುತ್ತ, ಕಲಿಸುತ್ತ ಸಾಗುವುದು ಒಂದು ಮಾದರಿಯಾದರೆ, ಪಠ್ಯದ ಹೊರಗೆ ಈ ಎಲ್ಲ ಪಠ್ಯಗಳ ಅನುಭವಗಳನ್ನು ಅದರ ಸಂಕೀರ್ಣತೆಯೊಡನೆ ನಾಟಕವಾಗಿ ಪ್ರದರ್ಶಿಸುವದು ಇನ್ನೊಂದು ಮಾದರಿಯಾಗುತ್ತದೆ.

2

ಮಾದರಿ 1: ತರಗತಿ ಒಂಭತ್ತು. ಪಾಠದ ಹೆಸರು ‘ಅವ್ವ.’ ಶಿಕ್ಷಕ ತರಗತಿಯ ಒಳಗೆ ಪ್ರವೇಶಿಸುತ್ತಾನೆ. ಕರಿಹಲಗೆ ಸ್ವಚ್ಛವಾಗಿರುವಂತೆ ನೋಡಿಕೊಂಡಿರುತ್ತಾನೆ. ಡಯಾಸ್, ಮೇಜು, ಕುರ್ಚಿ ಇವೆಲ್ಲವುಗಳನ್ನು ಸಮತೋಲಿತವಾಗಿ ಇಟ್ಟುಕೊಳ್ಳುತ್ತಾನೆ. ಈ ಪಾಠದ ಸಂದರ್ಭವನ್ನು ವಿವರಿಸುತ್ತಾನೆ. ಆವರಣ ಸೃಷ್ಟಿಸುತ್ತಾನೆ. ನಂತರ ಪಾಠವನ್ನು ವಾಚಿಕಾಭಿನಯದ ಎಲ್ಲ ಸಾಧ್ಯತೆಗಳನ್ನು ಬಳಸಿಕೊಂಡು ವಿಧ್ಯಾರ್ಥಿಗಳ ಮುಂದೆ ನಿರೂಪಿಸುತ್ತಾನೆ. ನಂತರ ಆ ಅನುಭವವನ್ನು ಅವರಿಗೇ ಅನುಭವಿಸಲು ಬಿಟ್ಟು ಮೌನವಾಗಿ ನಿರ್ಗಮಿಸುತ್ತಾನೆ.

ಮಾದರಿ 2 : ತರಗತಿ ಹತ್ತು. ಕಾವ್ಯಭಾಗ ; ರನ್ನನ ಗದಾಯುದ್ಧದ ‘ನೀರೋಳಗಿದುರ್ಂ ....................”

ತರಗತಿಯ ವಿದ್ಯಾರ್ಥಿಗಳೆಲ್ಲರೂ ಪಠ್ಯದ ನಿರೂಪಣೆಯ ಮಾತುಗಳನ್ನಾಡುತ್ತಾರೆ. ನಂತರ ಎಲ್ಲರೂ ವೈಶಂಪಾಯನ ಸರೋವರವನ್ನು ಸೃಷ್ಟಿಸುತ್ತಾರೆ. ಅದರೊಳಗಿನ ಇಬ್ಬರು ಭೀಮ, ಧುರ್ಯೋಧನರಾಗುತ್ತಾರೆ. ಸಂಭಾಷಣೆ, ಯುದ್ಧ, ಕ್ರಿಯೆ ಎಲ್ಲ ಮುಗಿದ ಮೇಲೆ ವಿದ್ಯಾರ್ಥಿಗಳೆಲ್ಲ ಮತ್ತೆ ನಿರೂಪಕರಾಗಿ ಪಠ್ಯದ ಸಾಲುಗಳನ್ನು ಮಂಡಿಸುತ್ತಾರೆ.

ಶಿಕ್ಷಕ ಮತ್ತು ವಿದ್ಯಾರ್ಥಿಗಳು ಪಾಠಬೋಧನೆಯ ರಂಗ ಕ್ರಿಯೆಯಲ್ಲಿ ತೊಡಗಬಹುದಾದ ಎರಡು ಮಾದರಿಗಳಿವು. ಆದರೆ ಇವಿಷ್ಟು ಅಲ್ಲ.

3 ದಯವಿಟ್ಟು ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ :

· ಪಾಠ ಮಾಡುವುದು ಕಠಿಣ


· ನಾಟಕ ಮಾಡುವುದು ಸುಲಭ


· ನಾಟಕವನ್ನು ಪಾಠ ಮಾಡಿದ ಹಾಗೆ ಮಾಡುವುದು ಇನ್ನೂ ಸುಲಭ


ಈ ಹೇಳಿಕೆಗಳು ಸುಳ್ಳಾಗಲಿ ಎಂದು ಪ್ರಾರ್ಥಿಸುತ್ತೇನೆ. 

-ಶ್ರೀಪಾದ ಭಟ್
**************