ಅಕ್ಟೋಬರ್ 20 ರಿಂದ 27 ರವರೆಗೆ ಸಮುದಾಯ ಮಕ್ಕಳ ರಜಾಮೇಳ

ಸಮುದಾಯವು ಈ ದಸರಾ ರಜೆಯಲ್ಲಿ ಮಕ್ಕಳ ರಜಾಮೇಳವನ್ನು ಆಯೋಜಿಸುತ್ತಿದೆ.ರಜಾ ಮೇಳಗಳು ವ್ಯಾಪಾರವಾಗಬಾರದು ಎಂಬ ಕಾಳಜಿಯಿಂದಲೇ ಸಮುದಾಯ ಮೇಳವನ್ನು ಆಯೋಜಿಸುತ್ತಿರುವುದರಿಂದ, ಕಳೆದ ಬೇಸಿಗೆ ರಜಾ ಮೇಳ `ರಂಗ ರಂಗು' ಮಾದರಿಯಲ್ಲೇ ಈ ಬಾರಿಯೂ ಮೇಳದ ಮಕ್ಕಳ ಪ್ರವೇಶ ಉಚಿತ. ಅಕ್ಟೋಬರ್ 20 ರಿಂದ 27 ರವರೆಗೆ ನಡೆಯುವ ಮೇಳದಲ್ಲಿ ಉಪಹಾರ, ಊಟ, ಸಂಪನ್ಮೂಲ ವ್ಯಕ್ತಿಗಳ ಗೌರವ ಧನ, ನಾಟಕ ಪ್ರದರ್ಶನ, ಸಾಮಗ್ರಿಗಳಿಗೆ ಪ್ರತಿ ಮಗುವಿನ ಮೇಲೆ ಎಂಟುದಿನಗಳಿಗೆ ತಲಾ ರೂ 900.00 ಖರ್ಚಾಗಲಿದೆಯೆಂದು ಅಂದಾಜಿಸಲಾಗಿದೆ. ಮೇಳವು ಬಣ್ಣದ ಕಲೆ, ಮಣ್ಣಿನ ಕಲೆಗಳೂ ಸೇರಿದಂತೆ ಮಗುವಿನ ವ್ಯಕ್ತಿತ್ವವನ್ನು ವಿಕಸಿಸುವ ಕಲಾಪ್ರಕಾರಗಳಾಸಕ್ತಿ ಮತ್ತು ಅಭಿರುಚಿಯನ್ನು ಮೂಡಿಸುವಂತಿರುತ್ತದೆ. ಮೇಳದ ಮಕ್ಕಳು ನಾಟಕವೊಂದರಲ್ಲಿ ಪಾಲ್ಗೊಳ್ಳಲಿದ್ದು, ಮೇಳದ ಸಮಾರೋಪದ ದಿನ ನಾಟಕ ಪ್ರದರ್ಶನವಿರುತ್ತದೆ. ಆರ್ಥಿಕ ಬೆಂಬಲ ನೀಡಲಿಚ್ಚಿಸುವವರು ದಯವಿಟ್ಟು ಸಂಪರ್ಕಿಸಿ-9481509699 ಅಥವಾ ಇದೇ ನಂಬರಿಗೆ YES ಎಂದು ಮೆಸೇಜ್ ಮಾಡಿ
****
ಸಮುದಾಯ ಅಕ್ಟೋಬರ್ 20 ರಿಂದ 27 ರವರೆಗೆ ಆಯೋಜಿಸುತ್ತಿರುವ ರಜಾಮೇಳದಲ್ಲಿ ವಾಸುದೇವ ಗಂಗೇರಾ ರಂಗ ನಿರ್ದೇಶಕರು (ಸುಲ್ತಾನ್ ಟಿಪ್ಪು,ಬುದ್ಧ ಪ್ರಬುದ್ಧ,ಕುಲಂ ಇತ್ಯಾದಿ), ಸಂತೋಷ ಗುಡ್ಡಿಯಂಗಡಿ ರಂಗ ನಿರ್ದೇಶಕ,ಕಥೆಗಾರ, ಸತೀಶ ಆಚಾರ್ಯ, ಭಾರತದ ಪ್ರಸಿದ್ಧ ವ್ಯಂಗ್ಯ ಚಿತ್ರಕಾರ (ಮಿಡ್ ಡೇ)ಗಿರೀಶ್-ಆವೆಮಣ್ಣಿನ ಕಜಲಾವಿದ, ಭೋಜು ಹಾಂಡ -ಪ್ರಸಿದ್ಧ ಜಲವರ್ಣ ಕಲಾವಿದ ಸೇರಿದಂತೆ ಅನೇಕ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುತ್ತಿದ್ದಾರೆ.ಅನೇಕ ಹಿರಿಯ ಮತ್ತು ಪ್ರಸಿದ್ಧ ಕಲಾವಿದರು ಮೇಳಕ್ಕೆ ಭೇಟಿ ನೀಡಲಿದ್ದಾರೆ.

ರಜಾ ಮೇಳಗಳು ತರಗತಿ ಕೋಣೆಯ ವಿಸ್ತರಿಸಿದ ಭಾಗವಾಗಿ, ಮಕ್ಕಳಿಗೆ ಸಜೆಯಾಗಿ, ದಂದೆಕೋರರ ಸ್ವರ್ಗವಾಗಿ ಪರಿಣಮಿಸುತ್ತಿರುವ ಕಾಲಘಟ್ಟದಲ್ಲೇ ಕುಂದಾಪುರ ಸಮುದಾಯ `ರಂಗ ರಂಗು’ ಮಕ್ಕಳ ರಜಾಮೇಳವನ್ನು ಆಯೋಜಿಸುತ್ತಿದೆ.ಮೇಳಕ್ಕೆ ಪ್ರವೇಶ ಉಚಿತ. ಮಕ್ಕಳಿಗೆ ರಜಾ ಶಿಬಿರದ ಅಗತ್ಯವಿಲ್ಲ, ಅಗತ್ಯವಿರುವುದು ಪ್ರೀತಿ, ಅವಕಾಶ ಮತ್ತು ಬೆಂಬಲ ಎಂಬ ನಮ್ಮ ನಿಲುವಿನಲ್ಲಿ ಈಗಲೂ ಬದಲಾವಣೆಯಿಲ್ಲ. ಆದರೂ , ಮನೆಯಲ್ಲಿ ಸಿಗಬೇಕಾದ ಪ್ರೀತಿ…ಅಜ್ಜಿಮನೆಯಲ್ಲಿಸಿಗಬೇಕಾದ ಅವಕಾಶ ಮತ್ತು ಮಕ್ಕಳ ಕಲ್ಪನೆಗಳ ಸಿಮೋಲ್ಲಂಘನಕ್ಕೆ ಶಾಲೆಯಲ್ಲಿ ಸಿಗಬೇಕಾದ ಬೆಂಬಲಗಳ ಚಿಕ್ಕ ತುಣಕನ್ನು ರಜಾ ಮೇಳದಲ್ಲಿ ಕೊಡುವ ಪ್ರಯತ್ನ ನಮ್ಮದು. ಈ ಮೇಳ ಮಕ್ಕಳೊಡನೆ ಕಳೆಯಲು ನಮಗೆ ಅವಕಾಶ ಒದಗಿಸಿದೆ..ನಾವು ಮಕ್ಕಳಿಗೆ ಋಣಿಯಾಗಿದ್ದೇವೆ. ಮರೆಯಲಾಗದ ಬಾಲ್ಯದ ಕ್ಷಣಗಳನ್ನು ನಾವವರಿಗೆ ದೇಣಿಗೆಯಾಗಿ ನೀಡದಿದ್ದರೆ ನಮ್ಮ ಮೇಳಕ್ಕೇನು ಅರ್ಥವಿದೆ? 

ಮೇಳದಲ್ಲಿ ಮಕ್ಕಳೊಡನೆ ಕೆಲಕ್ಷಣಗಳನ್ನು ಕಳೆಯಲು ನಿಮಗೆ ಸ್ವಾಗತ.