ರಂಗ ರಂಗು ಉಚಿತ ರಜಾ ಮೇಳ 2013

 ಪಠ್ಯಪುಸ್ತಕಗಳ ಮೂಲಕವಷ್ಟೇ  ಜಗತ್ತನ್ನು ನೋಡಬೇಕಾದ ಅನಿವಾರ್ಯತೆ ಮಕ್ಕಳದು.ಬಹುಷಃ,ಹಿಂದಿನ ಯಾವ ಕಾಲಘಟ್ಟದಲ್ಲೂ ಮಕ್ಕಳ ಪರಿಸ್ಥಿತಿ ಇಷ್ಟು ದಯನೀಯವಾಗಿರಲಾರದು. ಮಕ್ಕಳ ಸುಖ ಸಂತೋಷಗಳನ್ನು ಮಾರುಕಟ್ಟೆಯಲ್ಲಿ ಕೊಳ್ಳಬಹುದೆಂಬ ಭ್ರಮೆಯಲ್ಲಿರುವ ತಂದೆ-ತಾಯಿಯರು ಮಕ್ಕಳನ್ನು ತಮ್ಮ ಅಳಿದುಳಿದ ಕನಸುಗಳನ್ನು ನನಸು ಮಾಡುವ ಉತ್ತರಾಧಿಕಾರಿಯನ್ನಾಗಿ ಮಾಡಲು ಯಾವ ಬೆಲೆಯನ್ನಾದರೂ ತೆರಲು ತಯಾರಾಗಿದ್ದಾರೆ.ಆದರೆ,ಅವರು ತೆರುತ್ತಿರುವ ಬೆಲೆ ಬಹಳ ದುಬಾರಿಯಾದದ್ದೆಂಬ ಅರಿವು ಅವರಿಗಿದ್ದಂತಿಲ್ಲ! ಬಾಲ್ಯವು ಬಹಳ ಬೆಲೆಯುಳ್ಳದ್ದು.ಬಾಲ್ಯವನ್ನು ಬಲಿಕೊಟ್ಟು ಗಳಿಸುವಂತಹದ್ದು ಯಾವುದೂ ಇಲ್ಲ.ಆ ಕಾರಣದಿಂದಾಗಿ ಸಮುದಾಯ ಕುಂದಾಪುರ ಮಕ್ಕಳನ್ನು ಮಕ್ಕಳಾಗಿ ನೋಡುವ, ಅವರ ಬಾಲ್ಯವನ್ನು ಬದುಕಲು ಅವಕಾಶವೀಯುವ ಸಲುವಾಗಿ ಈ ದಸರಾ ರಜೆಯಲ್ಲಿ ರಂಗ ರಂಗು ಎಂಬ ರಜಾ ಮೇಳವನ್ನು ಆಯೋಜಿಸಿತು.ಮೇಳದಲ್ಲಿ ಮಕ್ಕಳು ತಮ್ಮ ಸಮವಯಸ್ಕ ಮಕ್ಕಳೊಡನೆ ಬಣ್ಣ, ಮಣ್ಣು,ಕಾಗದ,ರಂಗಭೂಮಿ ಮತ್ತಿತರ ಮಾಧ್ಯಮಗಳ ನೆರವಿನೊಂದಿಗೆ ಆಟವಾಡುವಂತಹ ವಾತಾವರಣವನ್ನು ಕಲ್ಪಿಸಲಾಯ್ತು.ಸಂತೋಷ ಗುಡ್ಡೆಯಂಗಡಿ,ಗಿರೀಶ ತಗ್ಗರ್ಸೆ,ಭೋಜು ಹಾಂಡಾ,ಗೋಪಾಲಕೃಷ್ಣ ಕೆ.ಸದಾನಂದ ಬೈಂದೂರು,ಚಿನ್ನಾ ವಾಸುದೇವ, ಮತ್ತಿತರ ಸಂಪನ್ಮೂಲ ವ್ಯಕ್ತಿಗಳು ಮಕ್ಕಳೊಂದಿಗೆ ಆಟವಾಡಿದರು.ರಂಗ ನಿರ್ದೇಶಕ ವಾಸುದೇವ ಗಂಗೇರ ದುಂಡಿರಾಜರ ಅಧ್ವಾನಪುರ ನಾಟಕದ ರೂಪಾಂತರವಾದ ಗಂಟೆರಾಜ ನಾಟಕವನ್ನು ಮಕ್ಕಳಿಗಾಗಿ ನಿರ್ದೇಶಿಸಿದರು.ಸಮಾರೋಪ ಸಭೆಯ ನಂತರ ನಾಟಕವನ್ನು ಪ್ರದರ್ಶಿಸಲಾಯ್ತು.ಮೇಳದಲ್ಲಿ ವಲಸೆ ಕಾರ್ಮಿಕರ ಮಕ್ಕಳು,ಸೌಲಭ್ಯ ವಂಚಿತ ಮಕ್ಕಳು ಬಹಳ ಸಂಖ್ಯೆಯಲ್ಲಿ ಭಾಗವಹಿಸಿದ್ದರು
ಮೇಳದ ಪ್ರಾರಂಭದ ದಿನ ರಾಷ್ಟ್ರ ಮಟ್ಟದ ಇನಸ್ಪೈರ್ ಸ್ವರ್ಣ ಪ್ರಶಸ್ತಿ ಪಡೆದ   ಏಳನೇ ತರಗತಿಯ ವಿದ್ಯಾರ್ಥಿನಿ ಶರಧಿ ಶೆಟ್ಟಿ ಮಕ್ಕಳೊಡನೆ ಯಶಸ್ಸಿನ ತನ್ನ ಪಯಣದ ಅನುಭವಗಳನ್ನು ಹಂಚಿಕೊಂಡರು.ಪುರಸಭಾಧ್ಯಕ್ಷೆ ಶ್ರೀಮತಿ ಕಲಾವತಿ ಮೇಳವನ್ನು ಉದ್ಘಾಟಿಸಿದರು.ಸಮಾರೋಪ ಸಭೆಯಲ್ಲಿ ಹಿರಿತಲೆಮಾರಿನ ಪ್ರತಿನಿಧಿಯಾಗಿ ವಿಶ್ರಾಂತ ಉಧ್ಯಮಿ ಶ್ರೀ ದತ್ತಾನಂದ ಗಂಗೊಳ್ಳಿ ಮಕ್ಕಳೊಂದಿಗೆ ಸಂವಾದ ನಡೆಸಿದರು.ಉಡುಪಿ ಡಯಟ್ ನ ಉಪಪ್ರಾಂಶುಪಾಲರಾದ ಶ್ರೀ ಶಂಕರ ಖಾರ್ವಿ ವಾಸುದೇವ ಗಂಗೇರ ದಂಪತಿಗಳನ್ನು ಸನ್ಮಾನಿಸಿದರು.ಕುಂದಾಪುರ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಶ್ರೀ ಗೋಪಾಲ ಶೆಟ್ಟಿ ಸಮಾರೋಪ ಭಾಷಣ ಮಾಡಿದರು.ಸಭೆಯ ಪ್ಸರಾರಂಭದಲ್ಮುಲಿ ಪ್ದಾರಾಸ್ಯತಾವಿಕವಾಗಿ ಮಾತನಾಡಿದ ಸಮುದಾಯ ಕುಂದಾಪುರದ ಅಧ್ಯಕ್ಷರಾದ ಉದಯ ಗಾಂವಕಾರ ಸಾಂಸ್ಕೃತಿಕ ಚಳುವಳಿಯನ್ನು ಬೇರುಮಟ್ಟದಿಂದ ಮಾತ್ರ ಕಟ್ಟಲು ಸಾಧ್ಯ ಎಂದು ನುಡಿದರು. ಕೋಶಾಧಿಕಾರಿ ಬಾಲಕೃಷ್ಣ  ಎಮ್ ನೆರವು ನೀಡಿದ ದಾನಿಗಳನ್ನು ಸ್ಮರಿಸಿದರು.ಜತೆ ಕಾರ್ಯದರ್ಶಿ ಶಂಕರ ಆನಗಳ್ಳಿ ವಂದಿಸಿದರು.