ಕವಿತೆಗಳ ರಂಗಾಭಿವ್ಯಕ್ತಿ-`ಹಸಿವು'
ಹಸಿವನ್ನು ಕೇಂದ್ರವಸ್ತುವಾಗಿಸಿಕೊಂಡು ಕನ್ನಡದ ಮಹತ್ವದ ಕವಿಗಳು ಬರೆದ ಕವಿತೆಗಳನ್ನು ಕೋಲಾಜಿನಂತೆ ಜೋಡಿಸಿ, ರಂಗಭಾಷೆಯಲ್ಲಿ ಕಾವ್ಯದ ಚೈತನ್ಯವನ್ನು ಹಿಡಿಡಿಡುವ  ಕುಂದಾಪುರ ಸಮುದಾಯದ ಸಾರ್ಥಕ ಪ್ರಯತ್ನಕ್ಕೆ ರವಿವಾರ ಕುಂದಾಪುರದ ಕಾರ್ಮಿಕ ಭವನದಲ್ಲಿ ಸೇರಿದ ರಂಗಾಸಕ್ತರು ಸಾಕ್ಷಿಯಾದರು. ಬೇಂದ್ರೆ, ಕುವೆಂಪು, ಸಿದ್ದಲಿಂಗಯ್ಯ, ಶಿವರುದ್ರಪ್ಪ ರಂತಹ ಕನ್ನಡದ ಹೆಸರಾಂತ ಕವಿಗಳ ಕವಿತೆಗಳೊಂದಿಗೆ ಹುಲಿಕಟ್ಟೆ ಚೆನ್ನಬಸಪ್ಪ, ಸತೀಶ ಕುಲಕರ್ಣಿಯವರಂತಹ ಸಮುದಾಯ ಚಳುವಳಿಯೊಂದಿಗೆ ಗುರುತಿಸಿಕೊಂಡ ಕವಿಗಳು ಮತ್ತು ಜೇಡರ ದಾಸಿಮಯ್ಯ ರಂತಹ ವಚನಕಾರರ ಕೃತಿಗಳನ್ನು ಆಯ್ದುಕೊಂಡು ನಿರ್ದೇಶಕ ವಾಸುದೇವ ಗಂಗೇರ ಅವುಗಳನ್ನು ತರ್ಕಬದ್ಧವಾಗಿ ಮತ್ತು ರಂಗಭೂಮಿಯ ಎಲ್ಲ ಸಾಧ್ಯತೆಗಳನ್ನು ಬಳಸಿಕೊಂಡು ಪೋಣಿಸಿದ್ದಾರೆ. ನಟರು ದೇಹಭಾಷೆಯ ಸಶಕ್ತ ಮತ್ತು ಪೂರಕ ಸಹಯೋಗದೊಂದಿಗೆ ಕವಿತೆಯನ್ನು ವಾಚಿಸುತ್ತಾ ಸಹನಟರ ಪ್ರತಿಕ್ರಿಯೆ-ಭಾವಸ್ಪಂದನಗಳ ಕ್ರೋಢೀೀಕರಿಸಿಕೊಳ್ಳುತ್ತಾ ಕವಿತೆಗೆ ಜೀವತುಂಬುವ ಪರಿ ವಿಶಿಷ್ಟವಾದುದು. ಪ್ರತಿಕವಿತೆಗೂ ಪ್ರತ್ಯೇಕ ಅಭಿನಯವಿನ್ಯಾಸವನ್ನು ರೂಪಿಸಿ ಕವಿತೆಯಿಂದ ಕವಿತೆಗೆ ಸೂಕ್ಷ್ಮ ಗಡಿರೇಖೆಯನ್ನು ಗುರುತಿಸಿದಂತೆ ಕಂಡರೂ ಕವಿತೆಗಳ ಒಟ್ಟು ಆಶಯ ಮತ್ತು ಹರಿವಿಗೆ ಭಂಗವಾಗದಂತೆ ನಿರೂಪಣೆಯಲ್ಲಿ ಎಚ್ಚರವಹಿಸಿರುವುದರಿಂದ ನಿರ್ದೇಶಕರು ಪ್ರಜ್ಞಾಪೂರ್ವಕವಾಗಿ ಉಂಟುಮಾಡುವ ತಿರುವುಗಳು ಒಂದರೊಳಗೊಂದು ವಿಲೀನವಾಗುತ್ತವೆ. ರಂಗಪ್ರಯೋಗಕ್ಕೆ ಆಯ್ದುಕೊಂಡ ಕವಿತೆಗಳು ಆಯಾ ಕವಿಗಳ ಪ್ರಾತಿನಿಧಿಕ ಕವಿತೆಗಳಲ್ಲವೆಂಬುದನ್ನು ನಿರ್ದೇಶಕ ವಾಸುದೇವ ಗಂಗೇರ ಒಪ್ಪಿಕೊಳ್ಳುತ್ತಾರೆ. ಹಸಿವಿನ ತೀವ್ರತೆಯನ್ನು ಇನ್ನೂ ಉತ್ಕಟವಾಗಿ ಹಿಡಿದಿಟ್ಟ ಕವಿತೆಗಳು ಬಿಟ್ಟುಹೋಗಿರುವುದಾದರೂ ಆಯ್ದುಕೊಂಡ ಕವಿತೆಗಳನ್ನು ಪ್ರೇಕ್ಷಕರ ಎದೆಯೊಳಗೆ  ಇಳಿಸುವ ಕುಂದಾಪುರ ಸಮುದಾಯದ ಆಶಯವನ್ನು ನಿರ್ದೇಶಕ ವಾಸುದೇವ ಗಂಗೇರ ಈಡೇರಿಸಿದ್ದಾರೆ.

ಸಮುದಾಯವು ಈ ಕಾರ್ಯಕ್ರಮದ ಮೂಲಕ  ಮೂರು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿಯನ್ನು ಉಸಿರಾಡಿದ ಸಿ. ಆರ್ ಸಿಂಹ, ನವ್ಯ ಪಂಥದ ಪ್ರಮುಖ ಕತೆಗಾರ, ಪ್ರಖರ ವೈಚಾರಿಕ ಪ್ರಜ್ಞೆಯ ಸಾಹಿತಿ ಯಶವಂತ ಚಿತ್ತಾಲ ಮತ್ತು ಕುಂದಾಪುರ ಸಮುದಾಯದ ಹುಟ್ಟಿನೊಂದಿಗೆ ಸಮುದಾಯ ಚಳುವಳಿಯಲ್ಲಿ ಭಾಗಿಯಾದ ರಂಗನಿರ್ದೇಶಕ ಕೃಷ್ಣಮೂರ್ತಿ ಕಾವ್ರಾಡಿ ಯವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಿತು.