ರಂಗ ರಂಗು ಮಕ್ಕಳಾಟ 2014


ಮಕ್ಕಳಿಗೆ ಕನಸುಗಳನ್ನು ಕಾಣುವ ಮತ್ತು ಅವುಗಳನ್ನು ನನಸುಮಾಡಿಕೊಳ್ಳುವ ಅವಕಾಶ ಸಿಗಲಿ

-ಡಾ. ಶ್ರೀಪಾದ ಭಟ್  ಕುಂದಾಪುರ ಸಮುದಾಯವು ಅಲ್ ಅರಿಫ್ ಸಂಸ್ಥೆಯ ಸಹಯೋಗದಲ್ಲಿ ಸಂಘಟಿಸಿದ್ದ ಮಕ್ಕಳ ಉಚಿತ ರಜಾಮೇಳದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ರಂಗಕರ್ಮಿ ಡಾ. ಶ್ರೀಪಾದ ಭಟ್ ಮಾತನಾಡುತ್ತಾ -``ಮಕ್ಕಳು, ಪಾಲಕರ ಅಳಿದುಳಿದ ಆಸೆಗಳ ವಾರಸುದಾರರಲ್ಲ. ಅವರಿಗೂ ಕನಸುಗಳಿರುತ್ತವೆ ಎಂಬುದನ್ನು ಪಾಲಕರು ಅರಿತುಕೊಳ್ಳಲಿ’’ ಎಂದರು. ರಂಗ ರಂಗು ರಜಾಮೇಳವು ಕುಂದಾಪುರದ ಮಹಾತ್ಮಾಗಾಂಧಿ ಉದ್ಯಾನವನದಲ್ಲಿರುವ ಸಮುದಾಯಭವನಲ್ಲಿ ಎಪ್ರಿಲ್ 25 ರಿಂದ ಎಂಟು ದಿನಗಳ ಕಾಲ ನಡೆದಿದ್ದು, ಮೇಳದಲ್ಲಿ ಸಂತೋಷ ಗುಡ್ಡಿಯಂಗಡಿ, ಭೋಜು ಹಾಂಡ, ಮೈಸೂರು ಹುಸೇನಿ, ಗೋಪಾಲಕೃಷ್ಣ ಮಂಗಳೂರು, ಗಿರೀಶ ತಗ್ಗರ್ಸೆ, ದಿನೇಶ ಪ್ರಭು, ಅಶೋಕ ತೆಕ್ಕಟ್ಟೆ ಮೊದಲಾದ ಕಲಾವಿದರು ಮಕ್ಕಳೊಂದಿಗೆ ಮಣ್ಣು, ಬಣ್ಣ, ಕಾಗದ, ಕತ್ತರಿಗಳೊಡನೆ ಆಟವಾಡಿದ್ದಾರೆ. ಕುಂದಾಪುರದ ತಹಶೀಲ್ದಾರ್‍ರಾದ ಶ್ರೀಮತಿ ಗಾಯತ್ರಿ ನಾಯಕರವರು ಮೇಳವನ್ನು ಉದ್ಘಾಟಿಸಿದ್ದು, ಹೆಸರಾಂತ ನಾಟಕ ನಿರ್ದೇಶಕ ಶ್ರೀಪಾದ ಭಟ್ ಸಮಾರೋಪ ಸಮಾರಂಭದ ಅತಿಥಿಗಳಾಗಿ ಭಾಗವಹಿಸಿದರು. ಮೇಳದ ಪ್ರಧಾನ ಪ್ರಾಯೋಜಕರಾದ ಅಲ್ ಅರಿಫ್ ಸಂಸ್ಥೆಗೆ, ಪ್ರಾತ್ಯಕ್ಷಿಕೆ ನೀಡಿದ ಕುಂದಾಪುರ ಅಗ್ನಿಶಾಮಕ ದಳದವರಿಗೆ, ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿಗಳು ಮತ್ತು ಎಲ್ಲ ಸಿಬ್ಬಂಧಿಗಳಿಗೆ, ಎಲ್ಲ ಸಂಪನ್ಮೂಲ ವ್ಯಕ್ತಿಗಳಿಗೆ, ದಾನಿಗಳಿಗೆ, ಸಹಾಯದ ಹಸ್ತ ಚಾಚಿದ ಎಲ್ಲರಿಗೂ ಸಮುದಾಯ ಕುಂದಾಪುರದ ಅಧ್ಯಕ್ಷರಾದ ಉದಯ ಗಾಂವಕಾರ ಕೃತಜ್ಞತೆ ಸಲ್ಲಿಸಿದರು.ಸುಧಾಕರ ಕಾಂಚನ ಕಾರ್ಯಕ್ರಮದ ಪ್ರಾರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿದರು.ಜಿ.ವಿ ಕಾರಂತ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ಬೈಂದೂರು ವಂದಿಸಿದರು. ಸಮಾರೋಪ ಕಾರ್ಯಕ್ರಮದ ನಂತರ, ಸಂತೋಷ ಗುಡ್ಡಿಯಂಗಡಿ ನಿರ್ದೇಶನದಲ್ಲಿ ಚೌಪಟ್ ರಾಜಾ ಎಂಬ ನಾಟಕವನ್ನು ಮಕ್ಕಳು ಅಭಿನಯಿಸಿದರು.ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ
http://samudaaya.wordpress.com/2014/05/04/summer-camp14/