ರಂಗ ರಂಗು ರಜಾಮೇಳ 2015

ಇದೇ 19 ರಿಂದ 26 ರವರೆಗೆ ಕುಂದಾಪುರ ಸಮುದಾಯವು ರಜಾಮೇಳವನ್ನು ಆಯೋಜಿಸುತ್ತಿದೆ. ಸ್ಥಳ; ವಡೇರಹೋಬಳಿಯ ಸರಕಾರಿ ಪ್ರಾಥಮಿಕ ಶಾಲೆಯಾದರೂ ಅಲ್ಲೇ ಅಂಟಿಕೊಳ್ಳುವುದಿಲ್ಲ. ಪಕ್ಕದಲ್ಲಿ ಗಾಂಧಿ ಮೈದಾನವಿದೆ, ಇನ್ನೊಂದು ಪಕ್ನೆದಲ್ಲಿ ನೆಹರೂ ಮೈದಾನ. ಒಂದು ಗೋಡೆ ಹಾರಿದರೆ ಗಾಂಧಿ ಪಾರ್ಕು. ಹಿಂಬದಿಯಲ್ಲಿ ಮೈಯ್ಯಾ ಕ್ಯಾಂಟೀನು..ಇನ್ನೊಂದಿಷ್ಟು ಮನೆಗಳು. ಮಕ್ಕಳು ಅಲ್ಲೆಲ್ಲಾ ಇರುತ್ತಾರೆ.
ರಂಗ-ರಂಗು ಉಚಿತ ರಜಾಮೇಳದ ಸಿದ್ಧತೆ ಪ್ರಾರಂಭವಾಗಿದೆ. ಕುಂದಾಪುರ ಸಿಟಿ ಜೇಸಿಯ ಯುವಕ-ಯುವತಿಯರು ಈ ಬಾರಿ ಸಮುದಾಯದ ಜೊತೆ ಇರುತ್ತಾರೆ. ರಜಾಮೇಳವನ್ನು ನಲವತ್ತು ಮಕ್ಕಳಿಗೆ ಸೀಮಿತಗೊಳಿಸಬೇಕೆಂದು ಪ್ರತಿಬಾರಿಯೂ ಯೋಚಿಸುತ್ತೇವೆ.ಆದರೆ ಇದುವರೆಗೂ ಸಾಧ್ಯವಾದದ್ದಿಲ್ಲ.
ರಜಾಮೇಳಕ್ಕೆ ಸೇರುವ ಮಕ್ಕಳು ಯಾವ ಧರ್ಮದವರು ಎಂದು ಕೇಳುವುದಿಲ್ಲ, ಯಾವ ಜಾತಿಯವರು ಎಂಬುದು ಬೇಕಾಗಿಲ್ಲ, ಯಾವ ಭಾಷೆ ಮಾತನಾಡುತ್ತಾರೆ ಎಂಬುದನ್ನೂ ವಿಚಾರಿಸುವುದಿಲ್ಲ. ಆದರೆ, ಯಾವ ಶಾಲೆಗೆ ಹೋಗುತ್ತಾರೆಂಬುದನ್ನು ಕೇಳುತ್ತೇವೆ.5 ರಿಂದ 10 ನೇ ತರಗತಿಯವರೆಗಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಹೆಚ್ಚಿನ ಆಧ್ಯತೆ.ಸಂಖ್ಯೆಯ ಮಿತಿಯೊಳಗೆ ಖಾಸಗಿ ಶಾಲೆಯ ಮಕ್ಕಳಿಗೂ ಅವಕಾಶವಿದೆ. ವಸತಿ ರಹಿತ ವಲಸೆ ಕಾರ್ಮಿಕರ ಮಕ್ಕಳೂ ರಜಾಮೇಳದಲ್ಲಿ ಭಾಗವಹಿಸುತ್ತಾರೆ. ಇವರೆಲ್ಲರಿಗಾಗಿ ರಂಗಕರ್ಮಿ ವಾಸುದೇವ ಗಂಗೇರಾ ನಾಟಕದ ಸ್ಕ್ರಿಪ್ಟ್ ಅಂತಿಮಗೊಳಿಸುತ್ತಿದ್ದಾರೆ. ನಾಟಕವಲ್ಲದೆ, ಮಾನವ ಸಮಾಜ ಕಂಡುಕೊಂಡ ಮೊದಲ ವೃತ್ತಿಗಳಲ್ಲೊಂದಾದ ಕುಂಬಾರಿಕೆಯೂ ಸೇರಿದಂತೆ ನೆಲಮೂಲದ ಜೀವನಕಲೆಗಳನ್ನು ಮಕ್ಕಳಿಗೆ ಪರಿಚಯಿಸುವ ಉದ್ಧೇಶವಿದೆ.ಮಕ್ಕಳನ್ನು ಅವರ ತಂದೆ-ತಾಯಿಯರ ಬಾಲ್ಯಕ್ಕೆ ಕರೆದುಕೊಂಡು ಹೋಗುವ ಪ್ರಯತ್ನಗಳು ಈ ಬಾರಿಯೂ ಇರುತ್ತವೆ.... ಮಾವಿನ ಕಾಯಿ-ಉಪ್ಪು-ಮೆಣಸು ಸೇರಿ ಪಿಚಡಿ ಮಾಡಿರಲಿಲ್ಲವೇ ನೀವು? ತೆಂಗಿನ ಗರಿಯ ಗಿರಿಗಿಟ್ಲಿ, ವಾಚು ಮರೆಯಬಹುದಾ? ಉದ್ದುದ್ದ ದಾಸಕಬ್ಬು ತಿಂದು ತೇಗಿದ್ದು...ಗೆಣಸನ್ನು ಒಲೆಯ ಬೂದಿಯಲ್ಲಿ ಹುಗಿದಿಟ್ಟು ಬೇಯುವ ಮೊದಲೇ ತೆಗೆದು ಮುಗಿಸಿದ್ದು...ಇಳಿತದಲ್ಲಿ ಹೊಳೆಯ ಹೊಯ್ಯಿಗೆಯಲ್ಲಿ ಕೈಯಾಡಿಸಿ ಮಳಿ ಹೆಕ್ಕಿದ್ದು...
ಮೇಳದಲ್ಲಿ ಮಕ್ಕಳು ಸಿನೇಮಾ ನೋಡಲಿದ್ದಾರೆ. ತಮ್ಮದೇ ಮಕ್ಕಳಾಟವನ್ನು ತೆರೆಯ ಮೇಲೆ ಕಂಡು ಖುಷಿಯಾಗಲಿದ್ದಾರೆ. ಈ ಬೇಸಿಗೆಯಲ್ಲೂ ನೀರಾಟ ಆಡಲಿದ್ದಾರೆ. ಮೇಳದಲ್ಲಿ ಸೇವಿಸುವ ಉಪಹಾರ, ಊಟ, ಪಾನೀಯ ಯಾವುದಾಗಬೇಕೆಂಬ ನಿರ್ಧಾರವನ್ನು ಅವರೇ ತೆಗೆದುಕೊಳ್ಳಿದ್ದಾರೆ.
ಮದ್ಯಾಹ್ನ ಊಟದ ನಂತರ ಅರ್ಧ ಘಂಟೆ ಗಾಂಧಿ ಪಾರ್ಕಿನಲ್ಲಿ ಆಟ, ಮೇಳದ ಎಂಟುದಿನಗಳಲ್ಲಿ ಕನಿಷ್ಠ ಎರಡು ಬಾರಿ ಸುತ್ತಾಟ... ಕ್ರಾಫ್ಟು, ಪೇಂಟಿಂಗು, ಮಾಸ್ಕು ಎಲ್ಲ ಮಾಮೂಲಿನಂತೆ ಇದ್ದದ್ದೇ...ನಿಮ್ಮ ಸಹಾಯ ಅಗತ್ಯವಿದೆ.
 ಕರೆಮಾಡಿ 9481509699 (ಉದಯ ಗಾಂವಕಾರ)