ಕುಂದಾಪುರದಲ್ಲಿ ನಾಟಕ ಪ್ರದರ್ಶನ - ಮೃತ್ಯುಂಜಯ


ನಿರ್ದೇಶನ: ಡಾ. ಶ್ರೀಪಾದ ಭಟ್
   ಪ್ರಗತಿಶೀಲತೆಯನ್ನು ಬದುಕಿನ, ಬರಹದ ಧ್ಯೇಯವಾಗಿಸಿಕೊಂಡು, ನಿರಂತರವಾಗಿ ರೈತರ, ಕಾರ್ಮಿಕರ, ಮಹಿಳೆಯರ ಕುರಿತು ಬರೆಯುತ್ತ ಹೋದವರು ನಿರಂಜನರು. ಅವರ ಎರಡು ಮಹತ್ವದ ಕಾದಂಬರಿಗಳಾದ ‘ಚಿರಸ್ಮರಣೆ’ ಮತ್ತು ‘ಮೃತ್ಯುಂಜಯ’ ಕಾದಂಬರಿಗಳ ರಂಗ ಪ್ರಸ್ತುತಿ ಈ ನಾಟಕ. ರೈತಬವಣೆಯ ಸಂಕಟಗಳನ್ನೂ ಆ ಬದುಕಿನ ಘನತೆಯನ್ನೂ ಒಟ್ಟಾಗಿಯೇ ಪರಿಭಾವಿಸುವ ನಿರಂಜನರ ಈ ಕಥನ, ವರ್ತಮಾನದ ಹಲವು ತಲ್ಲಣಗಳಿಗೆ ಒಂದು ಕಾಣ್ಕೆಯನ್ನು ಒದಗಿಸಬಲ್ಲದು.
ಪ್ರಾಚೀನ ಈಜಿಪ್ಟಿನಲ್ಲಿ ನಿರಂಕುಶ ಸತ್ತೆ ಹಾಗೂ ಸಂಪತ್ತಿಗಾಗಿ ಅರಮನೆ-ಗುರುಮನೆಗಳನಡುವೆ ನಡೆಯುವ ಚೌಕಮಣೆ ಆಟದಲ್ಲಿ ಬಲಿಯಾಗುತ್ತಿರುವ ಜನಸಾಮಾನ್ಯರ ಬದುಕನ್ನು ಪುನರ್ ಸಂಘಟಿಸುತ್ತ, ಸಮಾನತೆಯ ಸಮಾಜವೊಂದರ ಸ್ಥಾಪನೆಗೆ ಪ್ರಯತ್ನಿಸಿ ಬಲಿಯಾದವನು ಮೃತ್ಯುಂಜಯ ಕಾದಂಬರಿಯ ಮನೆಪ್ಟಾ. ಆತ ಅಳಿಯುತ್ತಾನಾದರೂ, ಆತ ಸಂಘಟಿಸಿದ ಹೋರಾಟ ಸೂರ್ಯದೇವನ ಮಗ ‘ಒಸೈರಿಸ್’ ನಂತೆ ‘ಮೃತ್ಯುಂಜಯ’.
ಚಿರಸ್ಮರಣೆ ಕಾದಂಬರಿಯು ಇಪ್ಪತ್ತನೇ ಶತಮಾನದ ಆದಿಯಲ್ಲಿ ಕೇರಳದ ಕೈಯೂರಿನಲ್ಲಿ ನಡೆದ ರೈತ ಚಳುವಳಿಗೆ ಸಂಬಂಧಿಸಿದ್ದು. ಸಮಾನತೆಯ ಕನಸು ಹೊತ್ತ ರೈತ ಸಂಘಟನೆಯೊಂದು ಬ್ರಿಟೀಷರು ಹಾಗೂ ಜಮೀನ್ದಾರರ ಚೌಕಮಣೆ ಆಟದಲ್ಲಿ ಬಲಿಯಾಗುತ್ತದಾದರೂ, ಅದು ಸಂಘಟಿಸಿದ ಹೋರಾಟ ಹೇಗೆ ‘ ಚಿರಸ್ಮರಣೆ’ಯಾಗಿ ಉಳಿಯಿತು ಎಂಬುದನ್ನು ಕಾಣಿಸುತ್ತದೆ.
ಹೀಗೆ ವರ್ಗ ಸಂಘರ್ಷ ಹಾಗೂ ತತ್ಪರಿಣಾಮವಾಗಿ ರೂಪುಗೊಳ್ಳುವ ಸಮಾನತೆಯ ಸಮಾಜವೊಂದರ ಕನಸುಕಂಡ ನಿರಂಜನರು ನಂಬಿದ್ದರು “ ಕತ್ತಲಾದ ಮೇಲೆ ಬೆಳಕು ಹರೀತದೆ. ಇದು ಸಾಮಾನ್ಯ ಅಂತ ತೋರುವ ಅಸಾಮಾನ್ಯ ವಿಷಯ” ಅಂತ.
ಹೀಗೆ ಅಕ್ಷರದ ಬೆಳಕಿನಲ್ಲಿ ಮನುಷ್ಯನ ಅದಮ್ಯವಾದ ಸ್ವಾತಂತ್ರ್ಯದ ಹಂಬಲವನ್ನು ಘನವಾದ ಹೋರಾಟವಾಗಿಸಿ ಅರಮನೆ ಗುರುಮನೆಗಳ, ಅಧಿಕಾರ ಸಂಪತ್ತುಗಳ ಅಪವಿತ್ರ ಮೈತ್ರಿಗೆ ಸವಾಲೆಸೆಯುವ ಕತೆಗಳನ್ನು ಸೃಜಿಸಿ ಕೊಟ್ಟ ನಿರಂಜನರ, ವಿಭಿನ್ನ ಕಾಲ ದೇಶಗಳ ಬರಹವನ್ನು ಒಂದುಗೂಡಿಸಿ ನಾವಿಲ್ಲಿ ಪುನರಭಿನಯಿಸುತ್ತಿದ್ದೇವೆ. ಇದು ಹೊಸಕಾಲದ ಹೊಸ ಹೊರತೋರ್ಕೆಯೂ ಹೌದು; ಮತ್ತು ಈ ಮೂಲಕ ನಿರಂಜನರ ಚೇತನಕ್ಕೆ ನಾವು ಸಲ್ಲಿಸುವ ರಂಗ ನಮನವೂ ಹೌದು.
ರಂಗಪಠ್ಯ : ಡಾ.ಎಂ.ಜಿ.ಹೆಗಡೆ. ವಿನ್ಯಾಸ : ಎಂ.ಎಸ್. ಸತ್ಯು. ನಿರ್ದೇಶನ : ಡಾ.ಶ್ರೀಪಾದ ಭಟ್ . ಸಹನಿರ್ದೇಶನ :ಯತೀಶ್ ಕೊಳ್ಳೇಗಾಲ ಮತ್ತು ಲಕ್ಷ್ಮಣ ಪಿ.

ಸಮುದಾಯ ಕುಂದಾಪುರದ  ಆಶ್ರಯದಲ್ಲಿ3 ಜನವರಿ 2016, ಸಂಜೆ 6.30 ಕ್ಕೆ ಕಲಾಮಂದಿರ, ಸ.ಪ.ಪೂ ಕಾಲೇಜು, ಕುಂದಾಪುರ ಇಲ್ಲಿಪ್ರದರ್ಶನ