ಈ ಭೂಮಿ ನಮ್ಮದು- ಪರಿಸರ ಜಾಗೃತಿ ಕಾರ್ಯಕ್ರಮ    ಕುಂದಾಪುರದ  ಸಮುದಾಯ ಸಾಂಸ್ಕೃತಿಕ  ಸಂಘಟನೆಯು   ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ಸತಿನ ಸಹಯೋಗದಲ್ಲಿ ಕೆ ಜಿ ಜಗನ್ನಾಥರಾವ್ ಸರ್ಕಾರಿ ಪ್ರೌಢಶಾಲೆ.ಕೋಣಿ ಇಲ್ಲಿನ ಇಕೋ ಕ್ಲಬ್‍ನ ಜೊತೆಗೂಡಿ “ಈ ಭೂಮಿ ನಮ್ಮದು”  ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತು. ಕುಂದಾಪುರ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷರಾದ ಉದಯ ಗಾಂವಕಾರ ಪ್ರಾಸ್ತಾವಿಕವಾಗಿ ಮಾತನಾಡಿ ಈ ಭೂಮಿಯಲ್ಲಿ ನಮ್ಮಿಂದಾಗಿ ಅಳಿದುಹೋದ ಜೀವಸಂಕುಲಗಳನ್ನು ಉದಾಹರಿಸುತ್ತಾ ಉಳಿದಿರುವ ವೈವಿಧ್ಯಮಯ ಜೀವಸಂಕುಲಗಳ ಹಕ್ಕುಗಳ ರಕ್ಷಣೆ, ಪೋಷಣೆ ಇಂದಿನ ಅಗತ್ಯ ಹಾಗೂ ಅದೇ ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದರು.  ಕರಾವಿಪ ದ ಉಡುಪಿ ಘಟಕದ ಅಧ್ಯಕ್ಷರಾದ ಶ್ರೀ ಯು ಆರ್ ಮಧ್ಯಸ್ಥರು ವಿದ್ಯಾರ್ಥಿಗಳಿಗೆ ಅವರ ಹಸಿರು ಕರ್ತವ್ಯಗಳನ್ನು ಸರಳವಾಗಿ ವಿವರಿಸಿದರು. ಶುದ್ಧ ನೀರಿನ ಕುರಿತಾದ “ಕ್ರಿ.ಶ.2070ರಲ್ಲಿ ಬರೆದ ಒಂದು ಪತ್ರ” ಪ್ರಸ್ತುತಪಡಿಸಲಾಯಿತು. ನಂತರ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿಯ ರಸಪ್ರಶ್ನೆ ಕಾರ್ಯಕ್ರಮ ನಡೆಸಿ ಪುಸ್ತಕ ರೂಪದಲ್ಲಿ ಬಹುಮಾನ ನೀಡಲಾಯಿತು. ಶಾಲೆಯ ಇಕೋ ಕ್ಲಬ್‍ನ ಸದಸ್ಯರಿಗೆ ಬಟ್ಟೆಯ ಚೀಲಗಳನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಸುರೇಶಪ್ಪ ವಹಿಸಿದ್ದರು. ಕುಂದಾಪುರ ಸಮುದಾಯದ ಖಜಾಂಚಿ ಶ್ರೀ ಬಾಲಕೃಷ್ಣ ಶಾಲೆಯ ಇಕೋ ಕ್ಲಬ್‍ನ ಸಂಚಾಲಕರಾದ ಶ್ರೀಮತಿ ಪ್ರಮೀಳಾ, ಅಧ್ಯಕ್ಷರಾದ ಕುಮಾರ ಜಯರಾಜ್ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.  ಕುಂದಾಪುರ ಸಮುದಾಯದ ಕಾರ್ಯದರ್ಶಿ ಸದಾನಂದ ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು.