ಮನುಷ್ಯತ್ವಕ್ಕೆ ಗಡಿಗಳಿಲ್ಲ. ಮಾನವೀಯತೆಯನ್ನು ಮೀರಿದ ರಾಷ್ಟ್ರೀಯತೆಯೂ ಇಲ್ಲ: ವರದೇಶ ಹಿರೇಗಂಗೆ

ಪ್ರೊ. ವರದೇಶ ಹಿರೇಗಂಗೆ(ಸಂಗ್ರಹ ಚಿತ್ರ)

ಗಡಿಗಳನ್ನು ಮೀರಿದ ಜಗತ್ತನ್ನು ಆಶಿಸುತ್ತಿದ್ದ ಕವಿ ಠಾಗೋರರು ರಾಷ್ಟ್ರೀಯವಾದದ ಪ್ರಖರ ಟೀಕಾಕಾರರಾಗಿದ್ದರು. ಆದರೆ, ಅವರು ಬರೆದ ಜನಗಣಮನ ನಮ್ಮ ರಾಷ್ಟ್ರಗೀತೆಯಾಗಿದೆ. ಇನ್ನೂ ವಿಶೇಷವೆಂದರೆ ಅವರೇ ಬರೆದ ಗೀತೆಯೊಂದು ನಮ್ಮ ನೆರೆ ರಾಷ್ಟ್ರದ ರಾಷ್ಟ್ರಗೀತೆಯೂ ಹೌದು. ನಮ್ಮ ರಾಷ್ಟ್ರೀಯವಾದವನ್ನು ಈ ಸಂಗತಿಗಳೇ ಚೆನ್ನಾಗಿ ವಿವರಿಸುತ್ತವೆ. ನಮ್ಮದು ಎಲ್ಲ ಜಾತಿ, ಧರ್ಮಗಳನ್ನು ಮತ್ತು ಎಲ್ಲ ಬಗೆಯ ಅಭಿಪ್ರಾಯ, ಪಂಥಗಳನ್ನು ಒಳಗೊಂಡು ರೂಪುಗೊಳ್ಳುತ್ತಿರುವ ರಾಷ್ಟ್ರವಾದ. ಎಲ್ಲ ಬಗೆಯ ಶೋಷಣೆ, ಹಸಿವು, ಅಸಮಾನತೆಗಳ ವಿರುದ್ಧ ತನ್ನ ಅಸಹನೆಯನ್ನು ವ್ಯಕ್ತಪಡಿಸಲು ನಮ್ಮ ರಾಷ್ಟ್ರವಾದದಲ್ಲಿ ಅವಕಾಶವಿದೆ” ಎಂದು ಮಣಿಪಾಲದ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕರಾದ ಶ್ರೀ ವರದೇಶ ಹಿರೇಗಂಗೆ ಅಭಿಪ್ರಾಯಪಟ್ಟರು. ಅವರು ಕುಂದಾಪುರ ಸಮುದಾಯ ಆಯೋಜಿಸಿದ್ದ ನಮ್ಮೊಳಗಿನ ರಾಷ್ರೀಯತೆ- ಒಂದು ಮಾತುಕತೆ ಎಂಬ ಸಂವಾದದಲ್ಲಿ ವಿಷಯವನ್ನು ಮಂಡಿಸುತ್ತಿದ್ದರು. ಶ್ರೀ ವರದೇಶ ಹಿರೆಗಂಗೆಯವರು ಮುಂದುವರಿದು, ಬ್ರಿಟೀಷರ ವಸಾಹತುಶಾಹಿ ಆಡಳಿತವು ಬೇರೆ ಬೇರೆ ಆಡಳಿತದಲ್ಲಿ ಹಂಚಿಹೋಗಿದ್ದ ಜನರನ್ನು ಒಂದೇ ಆಡಳಿತದಡಿ ತಂದಿರುವುದು ಮಾತ್ರವಲ್ಲ ಇಲ್ಲಿನ ಸಂಪತ್ತನ್ನು ಅವರು ಬಾಚಿಕೊಳ್ಳುತ್ತಿರುವುದರ ವಿರುದ್ಧ, ಅವರ ದುರಾಡಳಿತದ ವಿರುದ್ಧ ಜನರು ಧ್ರುವೀಕರಣಗೊಳ್ಳುವಲ್ಲಿ ತನ್ನ ಕೊಡುಗೆಯನ್ನು ನೀಡಿದೆÉ. ಮೊದಲ ಸ್ವಾತಂತ್ರ ಸಂಗ್ರಾಮವು ಅಂತಹ ಧ್ರುವೀಕರಣದ ಫಲ. ಆಗ ಭಾರತವೆಂಬ ಪರಿಕಲ್ಪನೆ ಇಲ್ಲದಿದ್ದರೂ ಬೇರೆ ಬೇರೆ ಜಾತಿ, ಧರ್ಮ, ಪ್ರಾಂತ್ಯದ ಜನರು ಒಗ್ಗೂಡಿ ಕೊನೆಯ ಮೊಗಲ್ ದೊರೆ ಬಹುದ್ದಾರ್ ಷಾರನ್ನು ತಮ್ಮ ರಾಜನೆಂದು ಘೋಷಿಸಿದರು. ರಾಷ್ರೀಯತೆಯ ಪರಿಕಲ್ಪನೆ ಆನಂತರವೂ ಮತ್ತೆ ಮತ್ತೆ ತಿದ್ದಿಕೊಳ್ಳುತ್ತಾ ಸಾಗಿ ಬಂದಿದೆ ಎಂದರು. ಇದಕ್ಕೂ ಮುನ್ನ, ಸಂವಾದಕ್ಕೆ ಪ್ರಸ್ತಾವನೆಯಾಗಿ ಮಾತನಾಡಿದ ಡಾ. ಹಯವದನ ಮೂಡುಸಗ್ರಿ ದೇಶಕ್ಕೂ ರಾಷ್ಟ್ರಕ್ಕೂ ವ್ಯತ್ಯಾಸವಿದೆ. ದೇಶವು ಒಂದು ರಾಜಕೀಯ ಸರಹದ್ದನ್ನು ಸೂಚಿಸುತ್ತದೆ. ಆದರೆ, ರಾಷ್ಟ್ರವು ಒಂದು ಪ್ರಕ್ರೀಯೆಯಾಗಿದೆ. ನಮ್ಮ ಜಾತಿ, ನಮ್ಮ ಊರು, ನಮ್ಮ ಭಾಷಿಕ ವಲಯಗಳು ಹೇಗೆ ನಮ್ಮ ಗುರುತಾಗಿ ಪರಿಣಮಿಸುತ್ತವೋ ಅಷ್ಟೇ ಅಯಾಚಿತವಾಗಿ ರಾಷ್ಟ್ರವು ನಮ್ಮ ಗುರುತಾಗಿ ರೂಪುಗೊಳ್ಳುವುದಿಲ್ಲ. ಇದ್ನು ಬಲವಂತದಿಂದ ಉಂಟಾಗುವಂತದ್ದಲ್ಲ ಎಂದರು. ಮಾನವ ಘನತೆಯನ್ನು ಕಾಪಾಡುವುದು ನಮ್ಮ ಅತ್ಯಂತಿಕ ಗುರಿ ಎಂಬುದನ್ನು ಒಪ್ಪಿಕೊಂಡಾಗ ರಾಷ್ಟ್ರೀಯತೆಯ ಚರ್ಚೆಗಳು ಅರ್ಥಪೂರ್ಣವಾಗಿ ನಡೆಯಲು ಸಾಧ್ಯ ಎಂದರು.


kundapraa.com

news kannada