ಒಂದು ಅದ್ಭುತ ನಾಟಕ- ಬೊಲಿವಿಯನ್ ಸ್ಟಾರ್ಸ್

ಬರೆಹ: ರಾಮಕೃಷ್ಣ ಹೇರ್ಳೆ

ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರ ಕಳೆದ ವರ್ಷ ಏರ್ಪಡಿಸಿದ್ದ ರಂಗೋತ್ಸವದಲ್ಲಿ ಕೇರಳದ ಲಿಟಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್ ಪ್ರದರ್ಶಿಸಿದ್ದ ಅದ್ಭುತ ನಾಟಕ  'ಚಿಲ್ಲರ ಸಮರಂ'ನ ( ನಿರ್ದೇಶನ- ಅರುಣ್ ಲಾಲ್) ಗುಂಗು ಇನ್ನೂ ಸಹ ಹಸಿಹಸಿಯಾಗಿರುವಾಗಲೆ, ಈ ಬಾರಿಯ ರಂಗೋತ್ಸವದಲ್ಲಿ ಅದೇ ತಂಡದ, ಅದೇ ನಿರ್ದೇಶಕರ ' ಬೊಲಿವಿಯನ್ ಸ್ಟಾರ್ಸ್' ( ದಿನಾಂಕ 03.01.2019) ಎಂಬ ಇನ್ನೊಂದು ಅದ್ಭುತ ನಾಟಕ ನೋಡಸಿಕ್ಕಿತು.ರಂಗೋತ್ಸವದ ಐದು ಸುಂದರ ನಾಟಕಗಳ ಸರಣಿಗೆ ಕಲಶಪ್ರಾಯವಾದ ಪ್ರಯೋಗವಿದು.
ಮಲಯಾಳಮ್ ಭಾಷೆ ತಿಳಿಯದಿದ್ದರೂ ನಾಟಕದ ರಸಾಸ್ವಾದನೆಗೆ ಕಿಂಚಿತ್ತೂ ಭಂಗವಾಗಿಲ್ಲ. ಭಾಷೆ ತಿಳಿದಿದ್ದರಂತೂ ಅದರ ಅನುಭವವೇ ಬೇರೆಯಿತ್ತು !
ಕೇರಳದಲ್ಲಿ ಜನಪ್ರಿಯ ಎನ್ನಲಾದ ಏಳು ಆಟಗಾರರ ತಂಡದ ಫುಟ್‌ಬಾಲ್ ಕ್ರೀಡೆಯ ಆಧಾರಿತ ನಾಟಕವಿದು. ಆಡುಭಾಷೆ, ಲಿಂಗ, ಧರ್ಮ,ಜಾತಿಯನ್ನೆಲ್ಲ ಮೀರುವ ' ಫುಟ್‌ಬಾಲ್ ಭಾಷೆ' ಬೊಲಿವಿಯನ್ ಸ್ಟಾರ್ಸ್ ಎಂಬ ಗ್ರಾಮೀಣ ತಂಡದ ಸಂರಚನೆಯನ್ನು ಗಟ್ಟಿಗೊಳಿಸುತ್ತಾ ಹೋಗುವ ಪೃಕ್ರಿಯೆಯನ್ನು ಕಟ್ಟಿದ ರೀತಿಯಂತೂ ಅವರ್ಣನೀಯ. ಹಿನ್ನೆಲೆ ಸಂಗೀತ, ಹಾಡು, ಅಭಿನಯ, ಉಡುಗೆ ತೊಡುಗೆ, ಬೆಳಕು, ದೃಶ್ಯಜೋಡಣೆ, ಪರಿಕರ ಮುಂತಾದ ಎಲ್ಲ ವಿಭಾಗದಲ್ಲೂ Perfect ಎನ್ನಬಹುದಾದ ಪ್ರಯೋಗ !
ಕ್ರೀಡೆ ಆಧಾರಿತ ಚಲನಚಿತ್ರಗಳ ಬಂದಿವೆ.(ಲಗಾನ್, ಚಕ್ ದೆ ಇಂಡಿಯ, ದಂಗಲ್,ಮೇರಿ ಕೋಮ್ ).ಆದರೆ ನಾಟಕಗಳು ಬಂದಿರಲಾರದು.ಈ ನಿಟ್ಟಿನಲ್ಲಿ ಬೊಲಿವಿಯನ್ ಸ್ಟಾರ್ಸ್ ಒಂದು unique ಪ್ರದರ್ಶನ.

ಈ ಬಾರಿಯ ರಂಗೋತ್ಸವದಲ್ಲಿ ಪ್ರದರ್ಶನಗೊಂಡ ಐದೂ ನಾಟಕಗಳು ವಿಭಿನ್ನವಾಗಿದ್ದು ಸಮೃದ್ಧ ರಂಜನೆ-ಚಿಂತನೆಗೆ ಅವಕಾಶವಾಯಿತು.