ಆಷಾಡದ ಒಂದು ದಿನ: ಎರಡು ಅನಿಸಿಕೆಗಳು


ಕಾವ್ಯದಂತಹ ಅನುಭವ
ಬರೆಹ: ರಾಘವೇಂದ್ರ ಬೈಂದೂರು

ಭಾರತದ ಮಹತ್ವದ ನಾಟಕಕಾರರಾದ ಮೋಹನ್ ರಾಕೇಶ್ 1958 ರಲ್ಲಿ ಬರೆದ 'ಆಷಾಢ್ ಕಾ ಏಕ್ ದಿನ್' ನಾಟಕವನ್ನು ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾವ ಪ್ರಧಾನ ಕಲ್ಪನೆ ಮತ್ತು ವಾಸ್ತವ ಪ್ರಪಂಚದ ಸಂಘರ್ಷ ಇಲ್ಲಿನ ಮುಖ್ಯ ವಸ್ತು. ಈ ಸಂಘರ್ಷದಲ್ಲಿ  ಮಲ್ಲಿಕಾ ಮತ್ತು ಕಾಳಿದಾಸ ಅನುಭವಿಸುವ ದುರಂತದ  ಚಿತ್ರಣ ಇದೆ. ಪ್ರಭುತ್ವವೆಂಬುದು ಕಾಳಿದಾಸನಂಥ ಭಾವುಕ ಕವಿಯ ಸ್ವಾತಂತ್ರ್ಯ ಕಸಿಯಬಲ್ಲುದು  ಅಲ್ಲದೇ ಅವನ ಭಾವ ಲೋಕಕ್ಕೆ ಪ್ರೇರಣೆಯಾಗಿರುವ ಮಲ್ಲಿಕಾಳ ಬದುಕನ್ನು ಸಹ ನಾಶಗೊಳಿಸಬಲ್ಲದು. ಇದೊಂದು ಕಾಲ, ದೇಶ ಮೀರಿದ ಗಂಭೀರ ನಾಟಕ. ನಿನ್ನೆಯ ಪ್ರಯೋಗವು realistic ಮಾದರಿಯನ್ನು ಹೊಂದಿದ್ದರೂ ನಡುವೆ ಬರುವ stylish ಮಾದರಿಯ ಇಬ್ಬರ ಹಾಸ್ಯ ಚೇಷ್ಟೆಗಳು ಉಸಿರುಗಟ್ಟಿಸುವ ಗಂಭಿರತೆಯಲ್ಲಿ ಕೊಂಚ ನಿರಾಳತೆ ಮೂಡಿಸಿದ್ದಂತೂ ನಿಜ. ನಾಟಕ ನೋಡುತ್ತಿದ್ದಾಗ ಸಮಯ ಮೀರಿದ ಅನುಭವವಾಗಲಿಲ್ಲ. ಒಂದು ನಾಟಕ ಎಲ್ಲಾ ದೃಷ್ಟಿಯಿಂದ neat & compact & nice production ಆಗಿ ಇದ್ದೂ ದಾಟಿಸಬೇಕಾದ ಗಾಢ ಅನುಭವ ದಾಟಿಸಲು ವಿಫಲವಾದ ಅನೇಕ ನಿದರ್ಶನಗಳಿವೆ. ಆದರೆ ನಿನ್ನೆಯ ನಾಟಕ ನೀಡಬೇಕಾದ ಅನುಭವವನ್ನು ನೀಡಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಇನ್ನಷ್ಟು ಬರೆಯಲಾರೆ. ಕಾವ್ಯದಂತಿರುವ ನಾಟಕವನ್ನು ಹತ್ತಿಯಂತೆ ಇನ್ನಷ್ಟು ಹಿಂಜಿ ಅದು ನೀಡಿರುವ ಭಾವ ತೀವ್ರತೆಯನ್ನು ಕಳೆದು ಕೊಳ್ಳುವ ಆತಂಕದಲ್ಲಿ...

ಇನ್ನೂ ಕಡಿಮೆ ಸಮಯದಲ್ಲಿ ಆಡಬಹುದಾಗಿದ್ದ ಒಳ್ಳೆಯ ನಾಟಕ
ಬರೆಹ: ರಾಮಕೃಷ್ಣ ಹೇರ್ಳೆ
ಒಂದೂವರೆ ಗಂಟೆಯ ಅವಧಿಯಲ್ಲಿ ನಾಟಕದ ಮೂಲಕ ( ಆಷಾಢದ ಒಂದು ದಿನ) ಹೇಳಬೇಕಾದದ್ದನ್ನು, ಆಡಬೇಕಾದದ್ದನ್ನು ಆರಾಮವಾಗಿ ಮುಗಿಸಬಹುದಾಗಿದ್ದನ್ನು, ಎರಡು ಗಂಟೆ ಐದು ನಿಮಿಷಕ್ಕೆ ಎಳೆಯದೆ ಇರುತ್ತಿದ್ದರೆ , ಈ ನಾಟಕವನ್ನು neat, compact  and a very nice production ಅನ್ನಬಹುದಾಗಿತ್ತು. ನಾಟಕದ ಕೊನೆಯ ದೃಶ್ಯದಲ್ಲಿ ಹೇಳಿಕೊಳ್ಳುವಷ್ಟು ' ಹುರುಳು' ಇಲ್ಲದ ಮಾತುಕತೆ ಜಗ್ಗಿದಂತೆ ಅನಿಸಿತು. ಯಾಕೆಂದರೆ, ಕಾಳಿದಾಸ-ಮಲ್ಲಿಕಾ ಆಡಿಕೊಂಡ ಎಲ್ಲ ಮಾತುಗಳು/ವಿಚಾರ ಅದಾಗಲೆ ಪ್ರಸ್ತಾಪವಾಗಿ ಹೋಗಿದ್ದು, ಪ್ರೇಕ್ಷಕನಲ್ಲಿ ಕುತೂಹಲ ಉಳಿದಿರಲಿಲ್ಲ. ಅವನ ಕುತೂಹಲ ಏನಿದ್ದರೂ ಅವರೀರ್ವರ ಸಮಾಗಮ ಹೇಗೆ ಅಂತ್ಯವಾಗುತ್ತದೆ ಏನೋದರಲ್ಲಿತ್ತು. ಅದಕ್ಕೆ ಉತ್ತರ ಕೊನೆಗೂ ಸಿಕ್ಕಿಲ್ಲ. ಹಾಗೂ ಆಷಾಢದ ಒಂದು ದಿನ ಎಂಬ ಶೀರ್ಷಿಕೆಯನ್ನು ನಾಟಕದ ಕಥಾವಸ್ತುವಿನೊಂದಿಗೆ ಹೊಂದಿಸಲು ತಡಕಾಡಬೇಕಾಯಿತು. ಕವಿರತ್ನ ಕಾಳಿದಾಸ ಚಲನಚಿತ್ರದಲ್ಲಿ ರಾಜ್‌ಕುಮಾರ್ ಧರಿಸಿದ ಪೋಷಾಕನ್ನು ಅನುಕರಿಸಿದೆ ಸ್ವಂತಿಕೆಯನ್ನು ಅಳವಡಿಸಬಹುದಾಗಿತ್ತು. ಹಾಸ್ಯಕ್ಕಾಗಿಯೇ ಜೋಡಿಸಿದ್ದ ಜೋಡಿ ಅಧಿಕಾರಿಗಳ ದೃಶ್ಯವು ನಾಟಕದ ರಿಯಲಿಸ್ಟಿಕ್ ಫಾರ್ಮ್ ಬಿಟ್ಟು stylise ಮಾಡಿದ್ದು ಸರಿಹೊಂದುತ್ತಿರಲಿಲ್ಲ.

ಅಭಿನಯ, ಸಂಗೀತ, ಧ್ವನಿ ಮತ್ತು ಬೆಳಕಿನ ವಿನ್ಯಾಸ ಅತ್ಯುತ್ತಮ . Stage design ಸಾಮಾನ್ಯ. ನಾಟಕದ ಬಗ್ಗೆ ವಯಕ್ತಿಕವಾಗಿ ನನಗನಿಸಿದ್ದು ಹೀಗೆ.

ಬೊಲಿವಿಯನ್ ಸ್ಟಾರ್ಸ್ ಲಿಂಕ್