ಸಾಹಿತ್ಯ ಸಮ್ಮೇಳನ: ಪ್ರತಿಭಟನೆಯ ದನಿಗಳು

‘ಪೂರ್ಣಕುಂಭ ಪದ್ಧತಿಯನ್ನು ಕಂಬಾರರು ಖಂಡಿಸಬೇಕಿತ್ತು’
- ಸಿ.ಬಸವಲಿಂಗಯ್ಯ

ವರದಿ: ಮಂಜುಶ್ರೀ ಎಂ. ಕಡಕೋಳ‌

ಡಾ.ಡಿ.ಸಿ.ಪಾವಟೆ ವೇದಿಕೆ, (ಧಾರ
ವಾಡ): ‘ಸಮ್ಮೇಳನದಲ್ಲಿ ಮಹಿಳೆಯರು ಪೂರ್ಣ ಕುಂಭ ಹೊತ್ತು ಮೆರವಣಿಗೆ ಮಾಡಿದ ಊಳಿಗಮಾನ್ಯ ಪದ್ಧತಿಯನ್ನು ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರರು ಖಂಡಿಸಬೇಕಿತ್ತು’ ಎಂದು ರಾಷ್ಟ್ರೀಯ ನಾಟಕ ಶಾಲೆ ನಿರ್ದೇಶಕ ನಿರ್ದೇಶಕ ಸಿ.ಬಸವಲಿಂಗಯ್ಯ
ಅಭಿಪ್ರಾಯಪಟ್ಟರು.

ಸಮ್ಮೇಳನದ ಸಮಾನಾಂತರ ವೇದಿಕೆ–2ರಲ್ಲಿ ಶನಿವಾರ ನಡೆದ ’ರಂಗಭೂಮಿ; ಇತ್ತೀಚಿನ ಪ್ರಯೋಗಗಳು’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಂಬಾರರು ತಮ್ಮ ಎಲ್ಲಾ ನಾಟಕಗಳಲ್ಲೂ ಹೆಣ್ಣಿನ ಬಗ್ಗೆ ಬರೆದಿದ್ದಾರೆ. ಕನಿಷ್ಠ ಸಮ್ಮೇಳನದ ಕೊನೆಯ ದಿನವಾದರೂ ಅವರು ಅಸಹಿಷ್ಣುತೆ,ಮೆರವಣಿಗೆಯನ್ನು ಖಂಡಿಸಿ ಮಾತನಾಡಬೇಕು. ಹೆಣ್ಣು ಮುಟ್ಟಾಗುತ್ತಾಳೆ ಅನ್ನುವ ಕಾರಣಕ್ಕಾಗಿ ದೇವಸ್ಥಾನ ಪ್ರವೇಶ ನಿಷೇಧಿಸಲಾಗುತ್ತದೆ. ಇದರ ಹಿಂದೆ ದೊಡ್ಡ ರಾಜಕಾರಣವೇ ನಡೆಯುತ್ತಿದೆ. ದೇವಸ್ಥಾನದ ಗರ್ಭಗುಡಿಯಲ್ಲೇ ಗರ್ಭ ಹೊತ್ತಿರುವ ಹೆಣ್ಣಿನ ಪ್ರವೇಶ ನಿರಾಕರಿಸಲಾಗುತ್ತದೆ. ಅಯ್ಯಪ್ಪ ಸ್ವಾಮಿ, ಅಪ್ಪ–ಅಮ್ಮ ಇಲ್ಲದೇ ಹುಟ್ಟಲು ಸಾಧ್ಯವೇ? ವೃತ್ತಿ ಮತ್ತು ಹವ್ಯಾಸಿ ರಂಗಭೂಮಿ ಇದಕ್ಕೆ ಪ್ರತಿಕ್ರಿಯಿಸಬೇಕು. ಇದನ್ನು ನಾವು ಕೇಳದೇ ಹೋದರೆ ಈ ರೀತಿಯ ಸಮ್ಮೇಳನ ಜಾತ್ರೆಯಾಗುತ್ತದೆಯೇ ಹೊರತು ಕನ್ನಡದ ಸಂಸ್ಕೃತಿ ಎಂದು ಹೇಳಿಕೊಳ್ಳಲೂ ಆಗದು’ ಎಂದು ಅಭಿಪ್ರಾಯಪಟ್ಟರು.

‘ರಂಗಭೂಮಿ ಯಾವತ್ತಿಗೂ ಹೆಣ್ಣಿನ ಶೋಷಣೆ, ಹಸಿವು, ದೌರ್ಜನ್ಯಗಳ ಕುರಿತು ಮಾತನಾಡಿದೆ. ನಾರ್ವೆಯ ನಾಟಕ
ಕಾರ ಇಬ್ಸನ್ ’ಡಾಲ್ ಹೌಸ್’ ನಾಟಕ ಬರೆದಾಗ, ಮೊದಲ ಬಾರಿಗೆ ಹೆಣ್ಣೊ
ಬ್ಬಳು ರಾತ್ರಿ ಮನೆಬಿಟ್ಟು ಹೊರಡುತ್ತಾಳೆ. ಆಗ ಇಡೀ ಯುರೋಪ್ ಬೆಚ್ಚಿ ಬೀಳು
ತ್ತದೆ. ಅಂತೆಯೇ ಇಂದಿಗೂ ಭಾರತದಲ್ಲಿ ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ ಎಂಬುದು ಗೊತ್ತಾಗುತ್ತದೆ’ ಎಂದರು.

ಮೂರ್ತಿಗಳಿಗಿಂತ ಮನಸು ಕಟ್ಟ
ಬೇಕು:‘100 ಅಡಿ ಬಸವಣ್ಣನ ಮೂರ್ತಿ ನಿಲ್ಲಿಸುವುದಕ್ಕಿಂತ ಬಸವಣ್ಣನನ್ನು ಜಂಗ
ಮಗೊಳಿಸಬೇಕಿದೆ. ಸರ್ದಾರ್ ವಲ್ಲಭ
ಭಾಯಿ ಪಟೇಲ್, ಬಸವಣ್ಣನ ಮೂರ್ತಿಗ
ಳನ್ನು ಕಟ್ಟುವುದಕ್ಕಿಂತ ದೇಶದ ಜನರ ಮನಸು–ಮನಸುಗಳನ್ನು ಕಟ್ಟಬೇಕಿದೆ. ಇಂದಿನ ರಾಜಕಾರಣ ಇಡೀ ದೇಶದ ಸಾಂಸ್ಕೃತಿಕ ಬದುಕನ್ನೇ ದಿಕ್ಕೆಡಿಸುತ್ತಿದೆ. ದೇಶದಲ್ಲಿ ಎಷ್ಟು ಅಸಹಿಷ್ಣುತೆ ಇದೆ ಎಂದರೆ ನಟ ನಾಸಿರುದ್ದೀನ್ ಷಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ  ಅವರಿಗೆ ಪಾಕಿಸ್ತಾನಕ್ಕೆ ವೀಸಾ ಕೊಟ್ಟು ಕಳುಹಿಸಿ ಎಂದು ಹೇಳಲಾಗುತ್ತದೆ’ ಎಂದು ವಿಷಾದಿಸಿದರು.

‘ಅಸಹಿಷ್ಣುತೆ, ನಿರುದ್ಯೋಗ, ಬಡತನ, ಶೋಷಣೆಯ ಕುರಿತು ಸಾಹಿತ್ಯ ಸಮ್ಮೇ
ಳನದಲ್ಲಿ ಚರ್ಚೆಗಳಾಗಬೇಕು. ರಂಗ
ಭೂಮಿ ಈಗಾಗಲೇ ಇಂಥ ವಿಷಯಗಳಿಗೆ ಸ್ಪಂದಿಸುತ್ತಿದೆ’ ಎಂದರು.
----------------

ಕುಂಭ ಮೆರವಣಿಗೆ: ಸಮ್ಮೇಳನಾಧ್ಯಕ್ಷರ ಮೌನಕ್ಕೆ ಖಂಡನೆ ‌l ಮಹಿಳಾ ಪ್ರತಿಭಟನೆ ಮೊಳಗಿಸಿದ ಕವಿತೆಗಳು:

ಅಂಬಿಕಾತನಯದತ್ತ ಪ್ರಧಾನ ವೇದಿಕೆ (ಧಾರವಾಡ): ಆಧುನಿಕ ಬದುಕಿನ ಒಡಲಿನೊಳಗಿಂದ ಭುಗಿಲೇಳುತ್ತಿರುವ ತಲ್ಲಣಗಳು, ಜಾತಿ ವೈಷಮ್ಯ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಸಂಘರ್ಷಗಳು... ಸಾಮಾಜಿಕ ಬದುಕು ಹೊಸ ತಿರುವು ಪಡೆಯುತ್ತಿರುವ ಸಂದರ್ಭದಲ್ಲಿ ಹೊಸ ತಲ್ಲಣಗಳಿಗೆ ಒಳಗಾಗುತ್ತಿರುವ ಮಹಿಳೆ ಮತ್ತು ಅವಳ ಅಂತರಂಗದ ಬೇಗುದಿ ಕವಿತೆಯ ರೂಪ ಪಡೆದು ಸಹೃದಯರನ್ನು ತಲುಪಲು ಹವಣಿಸಿದ ಪ್ರಯತ್ನಗಳಿಗೆ, 84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ನಡೆದ ಕವಿಗೋಷ್ಠಿ ಸಾಕ್ಷಿಯಾಯಿತು.

ಆರಂಭದಿಂದಲೇ ಕುಂಭ ಮೆರವಣಿಗೆಗೆ ವಿರೋಧ ಎದುರಿಸಿದ್ದ ಸಮ್ಮೇಳನ, ಕೊನೆಯ ದಿನವಾದ ಭಾನುವಾರವೂ ಕವಿಗೋಷ್ಠಿಯ ಮೂಲಕ ಪ್ರತಿಭಟನೆಯನ್ನು ಎದುರಿಸಬೇಕಾಯಿತು.

ಪ್ರತಿಭಟನೆ ದಾಖಲಿಸಲು, ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂಬ ಸಂದೇಶವನ್ನು ರವಾನಿಸಲೋ ಎಂಬಂತೆ ಕಪ್ಪು ಸೀರೆ– ಕೆಂಪು ರವಿಕೆ ತೊಟ್ಟು ಬಂದಿದ್ದ ಡಾ. ಎಚ್‌.ಎಸ್. ಅನುಪಮಾ, ಸಮ್ಮೇಳನಾಧ್ಯಕ್ಷರ ಮೌನವನ್ನು ಅವರ ಸಮ್ಮುಖದಲ್ಲೇ ಖಂಡಿಸಿದರು.

‘ಅಂದೇ ಹೇಳಬೇಕಿತ್ತು ಅಂದೆಯಾ ತಂದೆ’ ಎಂದು ಕೇಳುತ್ತಲೇ ‘ಬೆಂಕಿ– ಬೆಳಕಿನ ಫರಕು ತಿಳಿಯಲಿಲ್ಲ ನಮಗೆ, ಕೈಯಲ್ಲಿ ಹಿಡಿದ ದೀಪ ಕಿಚ್ಚಾಗಿ ಸುಡುವುದೆಂಬ ಅರಿವಾಗಲಿಲ್ಲ ನಮಗೆ’ ಎಂದು ಟೀಕಿಸಿದರು. ಎದೆನೆಲದ ಭಾಷೆ ನಿಮಗೂ ತಿಳಿಯಲಿಲ್ಲವೇ ಎಂದು ಕೇಳಿದರು.

‘ಕುಂಭ ಹಿಡಿದು ಮೂಕಾಂಬಿಕೆಯೇ ಆಗಿರಿ ಎಂದಿರಿ, ಬಿರುಬಿಸಿಲಿನಲಿ ನಡೆಯಿರೆಂದು ರಥವೇರಿದಿರಿ’ ಎಂದು ಕಂಬಾರ ನಡೆಯನ್ನು ತರಾಟೆಗೆ ತೆಗೆದುಕೊಂಡರು.

‘ನಮಗೆ ನಮ್ಮನ್ನು ತೋರಿಸಿದ್ದಕ್ಕೆ ಧನ್ಯವಾದಗಳು. ಹೊಸ ಚಿತ್ತಾರ ಬರೆಯುತ್ತೇವೆ ಕುಂಭಗಳ ಮೇಲೆ, ಮಹಿಳೆಯರ ಎದೆಗಳಲ್ಲಿ ದಿಟ್ಟ ಕವಿತೆ ಬರೆಯುತ್ತೇವೆ’ ಎಂದು ಹೇಳುತ್ತ ಹೋರಾಟ ಮುಂದುವರಿಯಲಿದೆ ಎಂಬ ಸಂದೇಶ ರವಾನಿಸಿದರು.

‌ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ನಿರಾಕರಿಸುತ್ತಿರುವವರಿಗೆ ‘ಅಸ್ವರ್ಶ‘ ಕವನದ ಮೂಲಕ ಉತ್ತರಿಸಿದ ಸಬಿತಾ ಬನ್ನಾಡಿ, ‘ಮುಟ್ಟು.. ಮುಟ್ಟು ಹೆಜ್ಜೆ ಹೆಜ್ಜೆಗೆ ಮಿಡಿವ ಸಂಗಾತಿಯ ಮುಟ್ಟು, ಮುಟ್ಟಿಲ್ಲದೇ ಹುಟ್ಟಿದವನೇ ಮುಟ್ಟುನಿಂತವಳ ಬಸಿರಿನ ಬಿಸುಪ ಮುಟ್ಟು’ ಎಂದರೆ,  ಅಕ್ಷತಾ ಕೃಷ್ಣಮೂರ್ತಿ ಅವರು ಬಾಲ್ಯದ ದಿನಗಳನ್ನು ಮೆಲುಕುಹಾಕಿ, ‘ಫ್ರಾಕು’ ಚಿಕ್ಕದಾಗಿದ್ದು ಗೊತ್ತೇ ಆಗಲಿಲ್ಲ ಎನ್ನುವ ರೂಪಕದ ಮೂಲಕ ದೇಗುಲದ ನಿಷೇಧವನ್ನು ಪ್ರಸ್ತಾಪಿಸಿದರು.

ಮೀ–ಟೂ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯರು ಗಟ್ಟಿಗೊಳ್ಳಬೇಕಾದ ಬಗೆಯನ್ನು ವಿವರಿಸಿದ ಡಾ. ಕೆ. ಆರ್‌. ಸಂಧ್ಯಾರೆಡ್ಡಿ ಹುಡುಗಿಯರಿಗೆ ಕಿವಿಮಾತು ಹೇಳಿದರು.
👌
‘ನಾನು ಕವಿಯಲ್ಲ‘ ಎನ್ನುತ್ತಲೇ ಎಂಬ ಕವಿತೆಯನ್ನು ಆರಂಭಿಸಿದ ‘ಪ್ರಜಾವಾಣಿ’ ಸಹ ಸಂಪಾದಕ ಬಿ.ಎಂ. ಹನೀಫ್‌, ಸಮಾಜದಲ್ಲಿನ ಅಸಹನೆ, ಅಶಾಂತಿ, ಮತಾಂಧತೆಯ ಬಗ್ಗೆ, ಕಾಣೆಯಾದ ಮಾನವೀಯ ಮೌಲ್ಯಗಳ ಬಗ್ಗೆ ನೋವು ಹೊರಹಾಕಿದರು.

‘ಭಕ್ತಿಯಿಂದ ಇಟ್ಟಿಗೆ ಹೊತ್ತವರು ಅದರಿಂದಲೇ ಸೋದರರ ತಲೆ ಜಜ್ಜಿದಾಗ ನಾವು ಮಾತನಾಡಲಿಲ್ಲ. ಮಸೀದಿಯ ಮಿನಾರುಗಳಲ್ಲಿ ಪಾರಿವಾಳದ ರಕ್ತದ ಹೆಪ್ಪುಗಟ್ಟಿದಾಗ ನಾನು ಉಸಿರೆತ್ತಲಿಲ್ಲ. ಹೇಳಿ ನಾನು ಕವಿಯಾಗುವುದಾದರೂ ಹೇಗೆ ಸ್ವಾಮಿ?’ ಎಂದು ಧಾರ್ಮಿಕ ಉಗ್ರವಾದವನ್ನು ಬಿಚ್ಚಿಟ್ಟರೆ, ‘ಇಲ್ಲಿ ನಿಂತು ಕಲ್ಲೆಸೆದರೆ ಯಾವುದಾದರೂ ಕವಿಯ ಮನೆ ಮೇಲೆ ಬೀಳುತ್ತದಂತೆ. ಕಲ್ಲೆಸೆಯುವುದ ಬಿಡಿ ಸದ್ದಿಲ್ಲದೇ ಮನೆ ಬಾಗಿಲಿಗೇ ಬಂದು ಹಣೆಗೇ ಗುಂಡಿಕ್ಕಿ ಹೋದರಲ್ಲ! ಆ ಗುಂಡಿನ ಸದ್ದು ಕೇಳಿಯೂ ಕೇಳದಂತಿರುವ ತಿಂದುಂಡು ಸುಖವಾಗಿರುವ ನಾನು ಕವಿಯಾಗುವುದಾದರೂ ಹೇಗೆ?ಎಂದು ಕೇಳುವ ಮೂಲಕ ರಕ್ತದ ಮಡುವಿನಲ್ಲಿ ಬಿದ್ದ ಡಾ.ಎಂ.ಎಂ. ಕಲಬುರ್ಗಿ ಅವರನ್ನು ಕಣ್ಣಮುಂದೆ ತಂದು ನಿಲ್ಲಿಸಿದರು.

ಪರಿಸರ ಹಸನುಗೊಳಿಸುವ ಹಂದಿಯನ್ನು ‘ಹಂದೆಮ್ಮ ತಾಯಿ’ ಎಂದು ಕರೆದು ನಿಂಗಪ್ಪ ಮುದೇನೂರ ಅವರು ಹಾಡು ಹಾಡಿದರು. ಶರಣು ಹುಲ್ಲೂರ ಅವರು, ಹೆಣ್ಣುಕುಲದ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಹೆಣ್ಣೊಬ್ಬಳು ಅಕ್ಕಮಹಾದೇವಿಯ ಮುಂದೆ ‘ಅಕ್ಕ ಕೇಳವ್ವಾ’ ಎಂದು ತೋಡಿಕೊಂಡ ಸಂಕಟವನ್ನು ಕಟ್ಟಿಕೊಟ್ಟ ಪರಿ ಅನನ್ಯವಾಗಿತ್ತು.

ದೇಸಿ ಸೊಗಡಿನ ರಟ್ಟೆ ನೋಯುವಂತೆ ಕೆಲಸ– ಹೊಟ್ಟೆ ತುಂಬುವಂತೆ ಕಸುವಿನ ಊಟದ ಸೊಗಸನ್ನು ಬಣ್ಣಿಸಿದ ಜಿ.ಎಚ್‌.ಹನ್ನೆರಡುಮಠ,  ಪ್ರಜ್ಞಾ ಮತ್ತೀಹಳ್ಳಿ, ಸಬಿತಾ ಬನ್ನಾಡಿ, ಅಕ್ಷತಾ ಕೃಷ್ಣಮೂರ್ತಿ, ಮತಾಂಧತೆಯ ಸೆಳವಿಗೆ ಸೆಳವಿಗೆ ಸಿಲುಕದಂತೆ ಎಚ್ಚರಿಕೆ ನೀಡಿದ ಪ್ರಭು ಚನ್ನಬಸವ ಸ್ವಾಮೀಜಿ, ಬಸವರಾಜ ಸೂಳೀಭಾವಿ, ನಂದಿನಿ ವಿಶ್ವನಾಥ, ಕಾ.ವೆಂ. ಶ್ರೀನಿವಾಸಮೂರ್ತಿ ಅವರ ಕವನಗಳು ಗೋಷ್ಠಿಯ ಮೆರುಗು ಹೆಚ್ಚಿಸಿದವು.
💕
ಎಲ್ಲ ಗೊಂದಲಗಳಿಂದ ದೂರ ಉಳಿದು, "ಅದು" ನಮ್ಮಂಥವರಿಗಲ್ಲ ಎನ್ನುವ ಮಂದಿಯ ನಡುವೆ, ಎಲ್ಲರ ನಡುವೆಯೇ ಇದ್ದು ಗಟ್ಟಿ ದನಿಯಲ್ಲಿ ತಪ್ಪನ್ನು ತಪ್ಪೆಂದು ತೋರಿದ ಹುಡುಗಿ. ದಾಕ್ಷಾಯಣಿ  ಹುಡೇದ ಅವರು ಧಾರವಾಡ ಸಾಹಿತ್ಯ ಸಮ್ಮೇಳನದಲ್ಲಿ ಪೂರ್ಣಕುಂಭ ಮೆರವಣಿಗೆಗೆ ತಮ್ಮ ಪ್ರತಿರೋಧವನ್ನು ತೋರಿ ,ಸಂಭಾವನೆಯನ್ನು ತಿರಸ್ಕರಿಸಿ ಕವಿಗೋಷ್ಠಿಯಲ್ಲಿ ಓದಿದ ಗಝಲ್.
👇
ಕುಂಬಾರ ಮಾಡಿದ ಪೂರ್ಣಕುಂಭವ
ಹೊತ್ತು ನಡೆದೆ ನಾನು ಸಖಿ
ಸಿಂಗಾರ ಮಾಡಿದ ಪುರುಷ ಜಂಭವ
ಹೊತ್ತು ನಡೆದೆ ನಾನು ಸಖಿ

ಹೊರುವುದಕ್ಕೂ ಹೆರುವುದಕ್ಕೂ
ನಾನೇ ಬೇಕು ಲೋಕಕೆ
ಗಂಗೆಯೇ ಇಲ್ಲದ ಅಕ್ಕಿಮಂಡಾಳದ
ಕುಂಭವ ಹೊತ್ತು ನಡೆದೆ ನಾನು ಸಖಿ

ಅಕ್ಷರವ ಹಂಚುವ ಕಸುಬುದಾರರು
ಪುಸ್ತಕ ಹಿಡಿದು ಮಾರಿದರು
ಅಕ್ಕ ನಡೆದ ಹಾದಿಯ ದಿಕ್ಕು ತಪ್ಪಿಸುವ
ಕುಂಭವ ಹೊತ್ತು ನಡೆದೆ ನಾನು ಸಖಿ

ಮನುವಾದ ಮುಗಿದಿಲ್ಲ ಇನ್ನೂ
ನಡೆದಿದೆ ಮೆರವಣಿಗೆ
ನನ್ನತನವೇ ಇಲ್ಲದ ಆಡಂಬರದ
ಕುಂಭವ ಹೊತ್ತು ನಡೆದೆ ನಾನು ಸಖಿ

ಗುಣವಂತಿ ದಾಚಿಯ ಧಿಕ್ಕಾರವಿದೆ
ನಿಮಗೆ ದೊರೆಗಳೆ
ಹೊಟ್ಟೆ ತುಂಬಿಸುವ ರಟ್ಟೆಗೆ ಕಸುವಾಗದ
ನಿಮ್ಮ ಕುಂಭವ ಹೊತ್ತು ನಡೆದೆ ನಾನು ಸಖಿ

-----------------
ಕುಂಭ ಮೆರವಣಿಗೆಗೆ ಇಸ್ಮಾಯಿಲ್ ಪ್ರತಿಭಟನೆ

‘ದಾಸ್ಯ ಹಾಗೂ ಶೋಷಣೆಯ ಸಂಕೇತವಾದ ಪೂರ್ಣ ಕುಂಭ ಮೆರವಣಿಗೆಯು ಸಮಾನತೆಯ ಪ್ರತಿಪಾದಿಸುವ ಸಾಹಿತ್ಯ ಸಮ್ಮೇಳನದಲ್ಲಿ ನಡೆಯಬಾರದಿತ್ತು. ಸಂಪ್ರದಾಯ ಹೆಸರಿನಲ್ಲಿ ನಡೆದ ಈ ಮೆರವಣಿಗೆಯನ್ನು ಆಯೋಜಕರು ಹಟ ಹೊತ್ತು ಮಾಡಿದ್ದನ್ನು ಸರ್ವಾಧ್ಯಕ್ಷರು ವಿರೋಧಿಸದ ನಡೆ ಕುರಿತು ವೈಯಕ್ತಿಕ ಪ್ರತಿಭಟನೆ ದಾಖಲಿಸುತ್ತೇನೆ‘ ಎಂದು ಎನ್‌.ಎ.ಎಂ.ಇಸ್ಮಾಯಿಲ್ ಹೇಳಿ ತಮ್ಮ ವಿಷಯ ಮಂಡಿಸಿದರು.